image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಲ್ ಮಂಜೂರಾತಿಗೆ ಲಂಚ: ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಎಸ್‌ಡಿಎ

ಬಿಲ್ ಮಂಜೂರಾತಿಗೆ ಲಂಚ: ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಎಸ್‌ಡಿಎ

ಮಂಗಳೂರು:ಸರ್ಕಾರಿ ಕಾಮಗಾರಿಯ ಬಿಲ್ ಪಾವತಿಗಾಗಿ ಶೇ. 4 ರಷ್ಟು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಎಸ್‌ಡಿಎ (SDA) ಸಂಪತ್  ಇಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೂರುದಾರರು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಾಗಿದ್ದು, 2025ರಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕೆಲಸಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು ಮಂಗಳೂರಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಪತ್ ಎಂಬುವವರು ಒಟ್ಟು ಬಿಲ್ ಮೊತ್ತದ ಶೇ. 4 ರಷ್ಟು, ಅಂದರೆ ₹22,600/- ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ಲಂಚ ನೀಡಲು ಮನಸ್ಸಿಲ್ಲದ ಗುತ್ತಿಗೆದಾರರು ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಇಂದು  ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು ಸಂಚು ರೂಪಿಸಿದ್ದರು. ಫಿರ್ಯಾದುದಾರರಿಂದ ₹22,600 ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಸಂಪತ್ ಅವರನ್ನು ಪೊಲೀಸರು ಅನಿರೀಕ್ಷಿತವಾಗಿ ದಾಳಿ ನಡೆಸಿ,  ಬಂಧಿಸಿದ್ದಾರೆ. ಸದ್ಯ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯ ವಿರುದ್ಧ ತನಿಖೆ ಮುಂದುವರಿದಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಡಿವೈಎಸ್ಪಿಗಳಾದ ಸುರೇಶ್ ಕುಮಾರ್ ಪಿ. ಮತ್ತು ಡಾ. ಗಾನ ಪಿ. ಕುಮಾರ್ ಹಾಗೂ ಪಿಐ ಶ್ರೀಮತಿ ಭಾರತಿ ಜಿ. ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ್ ಕೆ.ಎನ್. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ, ಗಂಗಣ್ಣ, ಮಹಾದೇವ, ಪವಿತ್ರ, ಲಕ್ಷ್ಮೀ, ರವಿ ಪವಾರ್ ಮತ್ತು ನವೀನ್ ಅವರು ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಕೆಲಸಗಳಿಗಾಗಿ ಯಾರಾದರೂ ಲಂಚಕ್ಕೆ ಬೇಡಿಕೆಯಿಟ್ಟರೆ ತಕ್ಷಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ