ಮಂಗಳೂರು: ಕೊಲೆ, ಅಪಹರಣ, ಸುಲಿಗೆ, ಕಳವು ಸೇರಿದಂತೆ ಸುಮಾರು 26 ಪ್ರಕರಣಗಳಲ್ಲಿ ಭಾಗಿಯಾಗಿ, ಸುಮಾರು 9 ವರ್ಷಗಳಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಹಳೆಯಂಗಡಿ ನಿವಾಸಿ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ (42) ಬಂಧಿತ ಆರೋಪಿ.
ಈತ ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕೊಲೆ, 4 ಕೊಲೆಯತ್ನ, ಗ್ಯಾಂಗ್ ರಾಬರಿ, 5 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಜಿಲ್ಲೆ ಕಳ್ಳತನ ಸರಗಳ್ಳತನ ಹಲ್ಲೆ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ತಯಾರಿ ಮತ್ತು ಸಂಚು ಮುಂತಾದ ಅಪರಾಧಗಳಿಗೆ ಸಂಬಂಧಿಸಿದ 26 ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಈತನ ವಿರುದ್ಧ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದಾಖಲಾಗಿದ್ದ ಪ್ರವೀಣ್ ಎಂಬವರ ಅಪಹರಣ, ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ 2020 ಫೆ.28ರಂದು ಹೈಕೋರ್ಟ್‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುತ್ತಾನೆ. ಅಲ್ಲದೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದರೋಡೆ ಪ್ರಕರಣದಲ್ಲಿ ನ್ಯಾಯಾಲಯದಿಂದ 3 ವರ್ಷ ಶಿಕ್ಷೆಗೆ ಒಳಗಾಗಿದ್ದನು. ಈತನ ವಿರುದ್ಧ 13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದು, ನ್ಯಾಯಾಲಯದಿಂದ ದಸ್ತಗಿರಿ ವಾರೆಂಟ್ ಗಳನ್ನು ಹೊರಡಿಸಲಾಗಿರುತ್ತದೆ. 5 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ಎಲ್.ಪಿ.ಸಿ ಎಂದು ಘೋಷಿಸಲಾಗಿದೆ.
2017ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತ ತನ್ನ ಸಹಚರರೊಂದಿಗೆ ಸೇರಿಕೊಂಡು ಲೆಪ್ಪಿ ಸಫ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆಗೈದ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿ ಬಳಿಕ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದನು. ಬಳಿಕ ಆಂಧ್ರಪ್ರದೇಶದ ರಾಯ್‌ಚೋಟಿ ಪ್ರದೇಶದಲ್ಲಿ ತನ್ನ ಹೆಸರನ್ನು, ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಬದಲಿಸಿದ್ದ. ಈ ನಕಲಿ ಹೆಸರಿನಲ್ಲಿಯೇ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಮಾಡಿ 2018ರಿಂದ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ವಿದೇಶಗಳಲ್ಲಿನ ಮಂಗಳೂರು ಮೂಲದ ವ್ಯಾಪಾರಸ್ಥರುಗಳನ್ನು ಸುಲಿಗೆ ಮಾಡಿರುವ ದೂರುಗಳು ಬಂದಿದೆ.
view vedio in Instagram
ಆರೋಪಿ ಸಫ್ವಾನ್ ಹುಸೈನ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ರಾಯಚೋಟಿಯಿಂದ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಅಲ್ಲದೆ ಆರೋಪಿ ಸಫ್ವಾನ್ ಹುಸೈನ್‌ಗೆ ತಲೆಮರೆಸಿಕೊಳ್ಳಲು, ನಕಲಿ ದಾಖಲೆ, ಪಾಸ್ ಪೋರ್ಟ್ ತಯಾರಿಸಲು ಸಹಕರಿಸಿದ ಮತ್ತು ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.