ಮೈಸೂರು: ಅರಮನೆ ಜಯಮಾರ್ತಾಂಡ ದ್ವಾರದ ಮುಂಭಾಗ ನಡೆದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತರಾಗಿದ್ದು, ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ತಂಡ ಭೇಟಿ ನೀಡಿ ಪರಿಶೀಲಿಸಿತು. ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂವರು ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಲಷ್ಕರ್ ಮೊಹಲ್ಲಾದ ಶರೀಫ್ ಲಾಡ್ಜ್‌ನಲ್ಲಿ ಮೃತ ಸಲೀಂ ಜತೆಯಲ್ಲಿದ್ದ ಅರ್ಬಾಜ್, ರಿಜ್ವಾನ್, ರಾಜು ದೇವರಾಜ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಎನ್‌ಐಎ ಅಧಿಕಾರಿಗಳು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಫೋಟದಿಂದ ಆಸ್ಪತ್ರೆ ಸೇರಿದ್ದ ಗಾಯಾಳುಗಳ ಪೈಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 3ಕ್ಕೇರಿದೆ. ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜನಗೂಡು ಚಾಮಲಾಪುರ ಬೀದಿಯ ನಿವಾಸಿ ಮಂಜುಳಾ(28) ಹೃದಯ ಸ್ತಂಭನವಾಗಿ ಮೃತಪಟ್ಟಿದ್ದಾರೆ. ಬೆಂಗಳೂರು ಮೂಲದ ಲಕ್ಷ್ಮೀ ಅವರೂ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಮೈಸೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲೂನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಲಖ್ನೋ ಮೂಲದವನು ಎಂಬುದು ಗೊತ್ತಾಗಿದೆ. ಅವನಿಗೆ ಸಿಲಿಂಡರ್ ಹೇಗೆ ಸಿಕ್ಕಿತು? ಅವನ ಬಳಿ ಹೀಲಿಯಂ ಹೇಗೆ ಬಂತು? ಓಪನ್ ಸ್ಪೇಸ್‌ನಲ್ಲಿ ಅದರ ಬಳಕೆ ಸರಿಯೇ ಎನ್ನುವುದು ಸೇರಿದಂತೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.