ಮಂಗಳೂರು: ಪರಂಗಿಪೇಟೆ ನಿವಾಸಿ ದೀಕ್ಷಿತಾಳನ್ನು ಚಾಕುವಿನಿಂದ ಇರಿದ ಪ್ರೇಮಿ ಆಕೆ ಮರಣ ಹೊಂದಿರಬಹುದೆಂದು ಗ್ರಹಿಸಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪರಂಗಿಪೇಟೆಯಲ್ಲಿ ನಡೆದಿದೆ.
ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26) ಎಂಬಾಕೆ ಹಾಗೂ ಕೋಡ್ಮನ್ ಗ್ರಾಮ ನಿವಾಸಿ ಸುಧೀರ್ (30) ಎಂಬಾತನು ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿರುತ್ತದೆ. ಆದರೂ ಸಹ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದು, 07/07/2025 ರಂದು ಬೆಳಿಗ್ಗೆ ಫರಂಗಿಪೇಟೆ, ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದು ದಿವ್ಯಾಳೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಮಾತಿಗೆ ಮಾತು ಬೆಳೆಸಿ ಗಲಾಟೆ ನಡೆದಿರುತ್ತದೆ. ಈ ವೇಳೆ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾ ನನ್ನು ಸಾಯಿಸಲು ಚುಚ್ಚಿದ್ದಾನೆ. ಆಕೆ ತಪ್ಪಿಸಿಕೊಂಡು ಹೋಗುವಾಗ ಬಿದ್ದಿದ್ದು, ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಆರೋಪಿಯು ಅಲ್ಲಿಂದ ತೆರಳಿ ದಿವ್ಯಾಳ ಬಾಡಿಗೆ ಮನೆಗೆ ಹೋಗಿ, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ತನಿಖೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.