ಮಂಗಳೂರು: ಖುದ್ದು ಅಣ್ಣಂದಿರೇ ಆಸ್ತಿ ಕಬಳಿಕೆ ಉದ್ದೇಶವನ್ನಿಟ್ಟುಕೊಂಡು, ವೀಲುನಾಮೆ ಯಾನೆ ಮರಣ ಶಾಸನ ದಾಖಲೆಯನ್ನು ಸೃಷ್ಟಿಸಿ, ವಂಚನೆ, ವಿಶ್ವಾಸದ್ರೋಹ, ಪ್ರಾಣ ಬೆದರಿಕೆ ಹಾಗೂ ಸುಲಿಗೆ ಮಾಡಿದ್ದಾರೆ ಎಂದು 51 ವರ್ಷ ಪ್ರಾಯದ ಬಂಟ್ವಾಳ ತಾಲೂಕು, ಬರಿಮಾರು ಗ್ರಾಮದ ಪುರುಷಕೋಡಿ ನಿವಾಸಿ ವಲೇರಿಯನ್ ಲಸ್ರಾದೊ ಇವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ಲಿಖಿತ ದೂರಿನಂತೆ ಜೂನ್ 6ರಂದು ಶುಕ್ರವಾರ ಪ್ರಕರಣ ದಾಖಲಾಗಿದೆ.
ಪಿರಿಯಾದುದಾರ ವಿವಾಹ ವಿಚ್ಛೇದನವಾದ ನಂತರ, ಖುದ್ದು ಸಹೋದರರಾದ 64 ವರ್ಷ ಪ್ರಾಯದ ಬೆನೆಡಿಕ್ಟ್ ಲಸ್ರಾದೊ ಹಾಗೂ 59 ವರ್ಷ ಪ್ರಾಯದ ಫೆಡ್ರಿಕ್ ಲಸ್ರಾದೊ ಜೊತೆಗೂಡಿ ಪಿರಿಯಾದುದಾರನಿಗೆ ಚೆನ್ನಾಗಿ ಕುಡಿಯಲು ನೀಡಿ, ಒಳ್ಳೆಯ ಮಾತುಗಳ ಮೂಲಕ ಪುಸಲಾಯಿಸಿ, ಮನವೊಲಿಸಿ – ಬಂಟ್ವಾಳ ತಾಲೂಕು, ಬರಿಮಾರು ಗ್ರಾಮದ ಸರ್ವೇ ನಂಬರ್ 51/5 ರಲ್ಲಿ 2.78 ಎಕ್ರೆ ವಿಸ್ತೀರ್ಣದ ಜಮೀನನ್ನು ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಸ್ತಾವೇಜು ನಂಬರ್ : VTL-3-00112-2018-19 ರಂತೆ ದಿನಾಂಕ : 28-12-2018 ರಂದು ರಿಜಿಸ್ಟ್ರೆಡ್ ವೀಲುನಾಮೆ ಯಾನೆ ಮರಣ ಶಾಸನ ಮಾಡಿಸಿ ಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆನಂತರ ಪ್ರತಿದಿನ ಸಂಜೆ ಶರಾಬು ಹಾಗೂ ಮಾಂಸ ನೀಡಿ ಅಮಲಿನ ದಾಸನಾಗುವಂತೆ ಮಾಡಿ, ಮೂಲ ವೀಲುನಾಮೆಯನ್ನು ಬಲಾತ್ಕಾರವಾಗಿ ಇಟ್ಟುಕೊಂಡಿದ್ದಾರೆ. ಸಹೋದರರ ಕೈಗೆ ರಿಜಿಸ್ಟ್ರೆಡ್ ವೀಲುನಾಮೆಯ ಮೂಲ ಪ್ರತಿ ದೊರಕಿದ ನಂತರ, ಹುಚ್ಚನೆಂಬ ಹಣೆಪಟ್ಟಿ ಕಟ್ಟಿ ಉಡುಪಿಯ "ಇಮ್ಮಾನ್ಯುಯೆಲ್ ಟ್ರಸ್ಟ್” ಎಂಬ ಹೆಸರಿನ ಆಶ್ರಮಕ್ಕೆ ಬಲಾತ್ಕಾರವಾಗಿ ಸೇರಿಸಿ, ಪಿರಿಯಾದುದಾರನ ಉಳಿತಾಯ ಖಾತೆಯಿಂದ ಎಟಿಎಂ ಮುಖಾಂತರ ಹಂತ ಹಂತವಾಗಿ 1.50 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿದ್ದಾರೆ ಎಂದು ದೂರಲಾಗಿದೆ.
ಆಶ್ರಮದಲ್ಲಿ ಸಹೋದರರು ತಮ್ಮ ಪ್ರಭಾವದ ಮೂಲಕ, ಹುಚ್ಚನೆಂಬ ಹಣೆಪಟ್ಟಿ ಕಟ್ಟಲು 8 ತಿಂಗಳು ಕೋಣೆಯಲ್ಲಿ ಬಲಾತ್ಕಾರವಾಗಿ ಕೂಡಿಹಾಕಿ, ಶೌಚಾಲಯದ ನೀರನ್ನು ಕುಡಿಸಿ, ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆಂದು ವಲೇರಿಯನ್ ಲಸ್ರಾದೊ ಲಿಖಿತ ದೂರದಲ್ಲಿ ತಿಳಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರವೂ ಅಪರಿಚಿತ ಗೂಂಡಾಗಳ ಸಹಾಯದಿಂದ ಪಂಪ್ ವೆಲ್ ಬಳಿ ಇರುವ ಆಶ್ರಮದಲ್ಲಿ ಕೂಡಿ ಹಾಕಿದ್ದರು. ಅಲ್ಲಿಂದಲೂ ತಪ್ಪಿಸಿ ಬಂದಿದ್ದೇನೆ ಎಂದವರು ದೂರಿನಲ್ಲಿ ವಿವರಿಸಿದ್ದಾರೆ.
ಇದೇ ಸಂದರ್ಭವನ್ನು ಉಪಯೋಗಿಸಿ, ಅಣ್ಣಂದಿರಾದ ಬೆನೆಡಿಕ್ಟ್ ಲಸ್ರಾದೊ ಹಾಗೂ ಫ್ರೆಡ್ರಿಕ್, ಪಿರಿಯಾದುದಾರನ ಮನೆಯೊಳಗೆ ಪಿರಿಯಾದುದಾರನಿಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ ಹಾಗೂ ಮನೆ ಮತ್ತು ಜಾಗವನ್ನು ತಮ್ಮ ಸ್ವಾಧೀನದಲ್ಲಿ ಬಲಾತ್ಕಾರವಾಗಿ ಇಟ್ಟುಕೊಂಡಿದ್ದಾರೆ. ತನ್ನ ಜಮೀನಿನಲ್ಲಿ ಕಳೆದ ಮೂರು ವರುಷಗಳಿಂದ ಬೆಳೆದ 45 ಕ್ವಿಂಟಲ್ ಗಳಿಗಿಂತಲೂ ಅಧಿಕ ಅಡಿಕೆಯನ್ನು ಮಾರಾಟ ಮಾಡಿ ಯಾವುದೇ ಹಣ ನೀಡದೆ ಬಿಕ್ಷಾಟನೆ ಮಾಡುವಂತೆ ಮಾಡಿದ್ದಾರೆ. 15 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ತನ್ನ ಹಣದಿಂದ ಅಣ್ಣ ಬೆನೆಡಿಕ್ಟ್ ಲಸ್ರಾದೊ ಕಾರು ಹಾಗೂ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ದೂರುದಾರ ತನ್ನ ದೂರಲ್ಲಿ ವಿವರಿಸಿದ್ದಾರೆ.
ದೂರಿನ ಜೊತೆ ಆರೋಪಿಗಳು ನೋಂದಾಯಿಸಿದ ವೀಲುನಾಮೆ ಯಾನೆ ಮರಣ ಶಾಸನದ ಪ್ರತಿ, ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಉಳಿತಾಯ ಖಾತೆಯಿಂದ ರೂಪಾಯಿ 1.50 ಲಕ್ಷ ಡ್ರಾ ಮಾಡಿದ ಸ್ಟೇಟ್ ಮೆಂಟ್ ನ ಪ್ರತಿಗಳನ್ನು ಪೊಲೀಸ್ ಠಾಣೆಗೆ ಹಾಜರು ಪಡಿಸಿದ್ದಾರೆ.
ವೀಲುನಾಮೆಯ ಮೂಲ ಪ್ರತಿ, ವಿಥ್ ಡ್ರಾ ಮಾಡಿದ 1.50 ಲಕ್ಷ ರೂಪಾಯಿ, ತನ್ನ ಮನೆಯ ಕೀಲಿಕೈ, 45 ಕ್ವಿಂಟಾಲ್ ಅಡಿಕೆ ಮಾರಿ ಪಡಕೊಂಡ ಸಂಪೂರ್ಣ ಹಣವನ್ನು - ತುರ್ತು ಕಾರ್ಯಾಚರಣೆ ನಡೆಸಿ ತನ್ನ ಸುಪರ್ದಿಗೆ ನೀಡಲು ಹಾಗೂ ಆಸ್ತಿಯ ರಕ್ಷಣೆ ಮಾಡಲು ಮತ್ತು ಪಿರಿಯಾದುದಾರನ ಕೊಲೆಯಾದಲ್ಲಿ ಬೆನೆಡಿಕ್ಟ್ ಲಸ್ರಾದೊ ಹಾಗೂ ಫ್ರೆಡ್ರಿಕ್ ಲಸ್ರಾದೊ ಇವರೀರ್ವರನ್ನು ಹೊಣೆಗಾರನನ್ನಾಗಿ ಮಾಡಲು ವಲೇರಿಯನ್ ಲಸ್ರಾದೊ ದೂರಿನಲ್ಲಿ ಕೋರಿದ್ದಾರೆ.
ತನಗೆ ಜೀವ ಬೆದರಿಕೆ ಹಾಕಿ ತನ್ನದೇ ಆಸ್ತಿಯಲ್ಲಿ ಉತ್ಪತ್ತಿ ಇದ್ದರೂ ಕೂಡ ಪಡಕೊಳ್ಳಲು ಆಗುತ್ತಿಲ್ಲ. ಯಾವ ಸಮಯದಲ್ಲೂ ಅಣ್ಣಂದಿರು ತನ್ನ ಪ್ರಾಣ ತೆಗೆಯಬಹುದು. ಸಹೋದರರಿಂದ ನನ್ನನ್ನೇ ನಾನು ರಕ್ಷಿಸಿಕೊಳ್ಳಲು ನನಗೆ ಸಾಧ್ಯವಿಲ್ಲ. ಆದುದರಿಂದ ಈ ಕೂಡಲೇ ತುರ್ತು ಕ್ರಮ ಕೈಗೊಳ್ಳಲು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯವರಿಗೆ ಲಿಖಿತ ದೂರಿನಲ್ಲಿ ವಿನಂತಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯವರು ಆರೋಪಿಗಳ ಮೇಲೆ FIR ದಾಖಲಿಸಿದ್ದಾರೆ.