ಮಂಗಳೂರು: ಸಮಾಜದ ಶಾಂತಿಗೆ ಭಂಗವನ್ನುಂಟು ಮಾಡುವಂತಹ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ಆರು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಇವರಲ್ಲಿ ಇಬ್ಬರು ವಿದೇಶದಲ್ಲಿದ್ದುಕೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚೋದನಾಕಾರಿ ಸಂದೇಶ ಹರಿಯಬಿಡುತ್ತಿದ್ದರು.ಲುಕ್ ಔಟ್ ಸುತ್ತೋಲೆ ಹೊರಡಿಸುವ ಮೂಲಕ ಅವರನ್ನು ಊರಿಗೆ ಕರೆಸಿಕೊಂಡು ಬಳಿಕ ಬಂಧಿಸಲಾಗಿದೆ.
'ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಇಂತಹ ಪೋಸ್ಟ್ ಗಳ ಮೇಲೆ ನಿಗಾ ಇಟ್ಟಿದ್ದ ಈ ತಂಡದ ಅಧಿಕಾರಿಗಳು ನಾಲ್ಕು ದಿನಗಳಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಮೇಲೆ ನಿಗಾ ಇಟ್ಟಿದ್ದು, ಅವರ ಮನೆಗೂ ಪೊಲೀಸರು ತೆರಳಲಿದ್ದಾರೆ' ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಂದಿತರು ಉಡುಪಿ ಜಿಲ್ಲೆಯ ಹೆಜಮಾಡಿಯ ಮೊಹಮ್ಮದ್ ಅಸ್ಲಾಂ (23), ಸುರತ್ಕಲ್ ಇಡ್ಯಾ ಗ್ರಾಮದ ಕಾಟಿಪಳ್ಳ ಆಶ್ರಯಕಾಲೊನಿಯ ಚೇತನ್ (20), ಹಳೆಯಂಗಡಿ ಚೇಳ್ಯಾರಿನ ನಿತಿನ್ ಅಡಪ (23), ಫರಂಗಿಪೇಟೆ ಅರ್ಕುಳದ ರಿಯಾಝ್ ಇಬ್ರಾಹಿಂ (30), ಕಸಬಾ ಬೆಂಗ್ರೆಯ ಜಮಾಲ್ ಝಾಕೀರ್ (21) ಹಾಗೂ ಹಳೆಯಂಗಡಿ ಕೊಳವೈಲ್‌ನ ಗುರು ಪ್ರಸಾದ್ ಎಂದು ಅವರು ಮಾಹಿತಿ ನೀಡಿದ್ದಾರೆ.
ಆರೋಪಿ ಮೊಹಮ್ಮದ್ ಅಸ್ಲಾಂ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಅಲ್ಲಿಂದಲೇ ಇನ್‌ಸ್ಟಾಗ್ರಾಂನಲ್ಲಿ 'ಟೀಮ್ ಜೋಕರ್ಸ್' ಎಂಬ ಪುಟವನ್ನು ಬಳಸಿ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ. ಆತನ ವಿರುದ್ಧ ನಗರದ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಲುಕ್ ಔಟ್ ಸುತ್ತೋಲೆ ಹೊರಡಿಸಿ ಕರೆಸಿಕೊಂಡು ಆತನನ್ನು ಬಂಧಿಸಲಾಗಿದೆ.
ಆರೋಪಿ ರಿಯಾಝ್ ಇಬ್ರಾಹಿಂ ಸೌದಿ ಅರೇಬಿಯಾದಲ್ಲಿದ್ದುಕೊಂಡು 'ಬ್ಯಾರಿ_ರಾಯಲ್_ನವಾಬ್' ಎಂಬ ಇನ್‌ಸ್ಟಾಗ್ರಾಂ ಪುಟದ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದ, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲುಕ್ ಔಟ್ ಸುತ್ತೋಲೆ ಹೊರಡಿಸಿ ಆರೋಪಿಯನ್ನು ಸ್ವದೇಶಕ್ಕೆ ಕರೆಸಿಕೊಂಡು ಬಂಧಿಸಲಾಗಿದೆ.
ಆರೋಪಿಗಳಾದ ಚೇತನ್ ಮತ್ತು ನಿತಿನ್ ಅಡಪ ಮುಸ್ಲಿಮರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ, ಅದನ್ನು ಬಳಸಿಕೊಂಡು 'ಟೀಮ್ ಕರ್ಣ-ಸುರತ್ಕಲ್' ಇನ್‌ಸ್ಟಾಗ್ರಾಂ ಪುಟ ತೆರೆದಿದ್ದರು. ಅದರಲ್ಲಿ ಚೆನ್ನಪ್ಪ ಅಲಿಯಾಸ್ ಮುತ್ತು ಸುರತ್ಕಲ್ ಎಂಬಾತ ಪ್ರಚೋದನಕಾರಿ ಸಂದೇಶ ಹರಿಯಬಿಟ್ಟಿದ್ದ. ಈ ಬಗ್ಗೆ ನಗರ ಉತ್ತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಆರೋಪಿ ಜಮಾಲ್ ಝಾಕೀರ್ 'ಟ್ರೋಲ್_ಬೆಂಗರೆ_ರೊ_ಮಕ್ಕಾ' ಎಂಬ ಇನ್‌ಸ್ಟಾಗ್ರಾಂ ಪುಟದ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಆರೋಪಿ ಗುರು ಪ್ರಸಾದ್ ಹಳೆಯಂಗಡಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ.
ಡಿಸಿಪಿ ಸಿದ್ದಾರ್ಥ ಗೋಯಲ್ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ರವಿಶಂಕರ್ (ಅಪರಾಧ ಮತ್ತು ಸಂಚಾರ) ಅವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್ ಅಪರಾಧ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಶೇಷ ತಂಡಗಳು ಈ ಪ್ರಕರಣಗಳ ತನಿಖೆ ಮುಂದುವರಿಸಿವೆ ಎಂದು ಆಯುಕ್ತರು ತಿಳಿಸಿದ್ದಾರೆ