ಮಂಗಳೂರು : ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು 25 ಜನರನ್ನು ತನಿಖೆಗೆ ಒಳಪಡಿಸಿ ಖಚಿತ ಮಾಹಿತಿಯ ಮೇರೆಗೆ 15 ಜನರನ್ನು ಬಂಧಿಸಲಾಗಿದೆ ಎಂದರು ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಇದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯುಕ್ತರು, ಅಪರಾಧ ಸ್ಥಳದಲ್ಲಿ ಪರಿಶೀಲನಾ ತಜ್ಞರು ಹಾಗೂ ಮೊಬೈಲ್ ಪೊರೆನ್ಸಿಕ್ ತಂಡಗಳು ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಮೈಮೇಲೆ ಸ್ಪಷ್ಟವಾದ ಹಾಗೂ ಗಂಭೀರ ಗಾಯಗಳು ಕಂಡುಬಾರದ ಕಾರಣ, ಅಪರಾಧ ಸ್ಥಳ ಪರಿಶೀಲನಾ ತಜ್ಞರು ಮತ್ತು ಪೊರೆನ್ಸಿಕ್ ತಂಡಗಳು ಶವ ಪರೀಕ್ಷೆ ನಡೆಸುವಂತೆ ಶಿಫಾರಸು ಮಾಡಿದ್ದರು. ಪ್ರಾಥಮಿಕವಾಗಿ, ಅಪರಿಚಿತ ಮೃತದೇಹ ಕಂಡು ಬಂದ ಬಗ್ಗೆ ಸ್ವೀಕೃತ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಮತ್ತು ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಿ, ಮೃತದೇಹವನ್ನು ಮರಣೋತ್ತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಮಂಗಳೂರು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್/ಟವರ್ ಡಂಪ್ ಡೇಟಾ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿದಂತೆ ದೀಪಕ್ ಕುಮಾರ್ ರವರು ನೀಡಿದ ದೂರಿನ ಹಿನ್ನೆಲೆ ಮಂಗಳೂರು ಗ್ರಾಮಾಂತರ 37/2025, 00: 103(2), 115(2), 189(2), 190, 191(1), 191(3), 240 , 2023 (BNS, 2023) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಸಚಿನ್ ಟಿ, ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೇಶ್ ಕುಮಾರ್,ದೀಕ್ಷಿತ್ ಕುಮಾರ್,ಸಂದೀಪ್,ವಿವಿಯನ್ ಆಳ್ವಾರೀಸ್,ಶ್ರೀದತ್ತ ರಾಹುಲ್, ಪ್ರದೀಪ್ ಕುಮಾರ್,ಮನೀಷ್ ಶೆಟ್ಟಿ,ಧನುಷ್, ದೀಕ್ಷಿತ್,ಕಿಶೋರ್ ಕುಮಾರ್ ಎಂಬುವವರನ್ನು ಬಂದಿಸಲಾಗಿದೆ. ಮೃತ ವ್ಯಕ್ತಿಯ ವಿಳಾಸ ಇನ್ನೂ ಪತ್ತೆಯಾಗದ ಕಾರಣ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.