ಬೆಂಗಳೂರು : ಪತ್ನಿ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪತ್ನಿಯ ಕಿರುಕುಳ ಆರೋಪ ಹೆಚ್ಚಾಗಿ ಕೇಳಿ ಬರುತ್ತಿದ್ದು, ಈಗ ಹಣಕ್ಕಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತಿ ಠಾಣೆಯ ಮೆಟ್ಟಿಲೇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ.
2022 ರ ಆಗಸ್ಟ್ ತಿಂಗಳಲ್ಲಿ ಸಂತ್ರಸ್ತ ಶ್ರೀಕಾಂತ್ ಎಂಬಾತ ಬಿಂಧುಶ್ರೀ ಎಂಬಾಕೆಯನ್ನು ವಿವಾಹವಾಗಿದ್ದು, ಮದುವೆಯಾದಗಿನಿಂದ ಇಲ್ಲಿಯವರೆಗೆ ಒಂದು ದಿನವೂ ಕೂಡ ಸಂಸಾರ ನಡೆಸಿಲ್ಲ, ಅಲ್ಲದೇ ಬಲವಂತವಾಗಿ ಮುಟ್ಟಲು ಮುಂದಾದರೆ ಡೆತ್ ನೋಟ್ ಬರೆದಿಟ್ಟು ಸಾಯುವುದಾಗಿ ಪತ್ನಿ ಬ್ಲಾಕ್ ಮೇಲ್ ಮಾಡಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಪತ್ನಿ ಹಾಗೂ ಆಕೆಯ ಮನೆಯವರು ಹೊಸ ಮನೆ ಖರೀದಿಸಲು ಹಣ ನೀಡುವಂತೆ ಹಲ್ಲೆ ನಡೆಸುತ್ತಿದ್ದಾರೆ. ಜೊತೆಗೆ ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾರೆ. ಹಣ ಕೊಡಲಿಲ್ಲ ಅಂದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ. 60 ವರ್ಷವಾದ ಮೇಲೆ ಮಕ್ಕಳು ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದಾಳೆ. ಪತ್ನಿಯ ಕಿರುಕುಳದಿಂದ ಸರಿಯಾಗಿ ಕೆಲಸ ಮಾಡಲು ಕೂಡ ಆಗದೆ ಒಳ್ಳೆಯ ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಅರೋಪಿಸಿದ್ದಾರೆ. ವರ್ಕ್ ಫ್ರಮ್ ಹೋಂ ಕೆಲಸದ ಹಿನ್ನಲೆ ಮನೆಯಲ್ಲೇ ಕೆಲಸ ಮಾಡುವ ಪರಿಸ್ಥಿತಿ ಬಂದಿದ್ದು, ಮುಖ್ಯವಾದ ಮೀಟಿಂಗ್ ಸಮಯದಲ್ಲಿ ಬೇಕೆಂದೇ ಜಗಳ ಮಾಡೋದು, ಡಾನ್ಸ್ ಮಾಡೋದು, ಹೀಗೆ ಸಾಕಷ್ಟು ಹಿಂಸೆ ನೀಡಿದ ಹಿನ್ನಲೆ ಕೆಲಸ ಕಳೆದುಕೊಂಡೆ. ಈಕೆಯ ಹಿಂಸಾಚಾರಕ್ಕೆ ಬೇಸತ್ತು ಡೈವೋರ್ಸ್ ಕೇಳಿದ್ರೆ 45 ಲಕ್ಷ ಕೊಡು ಎಂದು ಕೇಳುತ್ತಾಳೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತ ಶ್ರೀಕಾಂತ್ ಪತ್ನಿ ಹಾಗೂ ಆಕೆಯ ಕುಟುಂಬದ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.