ಮಂಗಳೂರು: ಬೈಕ್‌ಗೆ ಕಾರು ಢಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿಯ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಸತೀಶ್ ಕುಮಾರ್ ಕೆ.ಎಂ ಎಂಬಾತ ತನ್ನ ಮನೆಯ ಮುಂದಿನ ಮನೆಯಲ್ಲಿ ವಾಸವಾಗಿದ್ದ ಮುರಳಿ ಪ್ರಸಾದ್‌ಗೆ ಸದಾಕಾಲ ತಂಟೆ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದ್ದು, 2023ರಲ್ಲಿ ಮುರಳಿ ಪ್ರಸಾದ್‌ನ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸತೀಶ್ ಕುಮಾರ್ ವಿನಾ ಕಾರಣ ಬೈಕ್‌ನಲ್ಲಿ ಬಂದು ತಾಗಿಸಿಕೊಂಡು ಹೋಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾ.13ರಂದು ಬೆಳಗ್ಗೆ 8:15ಕ್ಕೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯರಸ್ತೆಯಲ್ಲಿ ತಾನು ಬೈಕ್‌ನಲ್ಲಿ ಮನೆಯಿಂದ ಹೋಗುತ್ತಿರುವಾಗ ಆರೋಪಿ ಸತೀಶ್ ಕುಮಾರ್ ತನ್ನ ಕಾರಿನಲ್ಲಿ ಕಾದು ಕುಳಿತು ಉದ್ದೇಶಪೂರ್ವಕವಾಗಿ ತನ್ನನ್ನು ಕೊಲೆಮಾಡುವ ಉದ್ದೇಶದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೆ ನಡೆದುಕೊಂಡು ಹೋಗುತ್ತಿದ್ದ ಹೆಂಗಸಿಗೆ ಢಿಕ್ಕಿ ಹೊಡೆದ ಪರಿಣಾಮ ಆಕೆಗೆ ಗಾಯವಾಗಿದೆ. ತನಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮುರಳಿ ಪ್ರಸಾದ್ ದೂರು ನೀಡಿದ್ದಾರೆ. ಅದರಂತೆ ಸತೀಶ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಕಾರನ್ನು ವಶಪಡಿಸಲಾಗಿದೆ.