ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮೂಲಕ ಯುವತಿಯರ ನಂಬರ್ ಪಡೆದು ಅವರ ಅಶ್ಲೀಲ ವೀಡಿಯೋ ಇರುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದ ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಈದು ಗ್ರಾಮದ ಸತೀಶ್ ಹೊಸ್ಮಾರು (36) ಬಂಧಿತ ಆರೋಪಿ ಈತ ಹುಡುಗಿಯರ ಮೊಬೈಲ್ ನಂಬರನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಐಡಿ ಮೂಲಕ ಪಡೆದು ಅವರಿಗೆ ನಿಮ್ಮ ಅಶ್ಲೀಲ ವೀಡಿಯೋ ಇರುವುದಾಗಿ ಹೇಳಿ ಬೆದರಿಕೆ ಹಾಕುತ್ತಿದ್ದ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ. ಈ ಬಗ್ಗೆ ಕದ್ರಿ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು.
ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು ಸತೀಶ್ ಮತ್ತು ಆತನ ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್‌ನಲ್ಲಿ ಸಂಬಂಧಪಟ್ಟ ದಾಖಲೆಗಳು ಲಭಿಸಿದೆ. ಆತನ ವಿರುದ್ಧ ಕಾರ್ಕಳ ಗ್ರಾಮಾಂತರ ಮತ್ತು ನಗರ ಠಾಣೆಯಲ್ಲಿ ಕಳವು, ಮಹಿಳೆಯ ಮಾನಭಂಗ, ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ವರ್ಷದ ಹಿಂದೆ ಕಾರ್ಕಳ ನಗರ ಠಾಣೆಯಲ್ಲಿ ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದ.
ಕದ್ರಿ ಪೊಲೀಸ್ ಠಾಣಾ ನಿರೀಕ್ಷಕ ಸೋಮಶೇಖರ್ ಜೆ.ಸಿ., ಪಿಎಸ್‌ಐ ಮನೋಹರ್ ಪ್ರಸಾದ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.