ಮಂಗಳೂರು: ಹಾಡಹಗಲೇ ಮಂಗಳೂರು ಸೆಂಟ್ರಲ್ ಜೈಲ್‌ಗೆ ಅಮಲು ಪದಾರ್ಥ ಪೂರೈಕೆಯಾಗುತ್ತದೆಯೇ ಎಂಬ ಅನುಮಾನ ಮಾಜಿ ಮೇಯರ್ ಕಾರು ಡ್ಯಾಶ್ ಬೋರ್ಡ್‌ನಲ್ಲಿ ಸೆರೆಯಾದ ದೃಶ್ಯದಿಂದ ಕಾಡಲಾರಂಭಿಸಿದೆ.
ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಅವರು ರವಿವಾರ ಮಧ್ಯಾಹ್ನ ತಮ್ಮ ಕಾರಿನಲ್ಲಿ ಜೈಲು ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಆಗ ಜೈಲು ಆವರಣದ ಹೊರಗಡೆ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್‌ನಲ್ಲಿ ಆಗಮಿಸಿದ ಇಬ್ಬರು ಆಗಂತುಕರು ಜೈಲಿನ ಹೊರಭಾಗದಲ್ಲಿರುವ ರಸ್ತೆಯಿಂದ ಪ್ಲಾಸ್ಟಿಕ್ ಕವರ್ ನಲ್ಲಿ ಜೈಲು ಆವರಣದೊಳಗಡೆಗೆ ಏನನ್ನೋ ಎಸೆದಿದ್ದಾರೆ. ಈ ದೃಶ್ಯ ಅಲ್ಲಿಯೇ ಸಾಗುತ್ತಿದ್ದ ಕವಿತಾ ಸನಿಲ್ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಏನನ್ನೋ ಎಸೆದ ಇಬ್ಬರು ಅಲ್ಲಿಂದ ಸ್ಕೂಟರ್‌ನಲ್ಲಿ ಎಸ್ಕೇಪ್ ಆಗಿದ್ದಾರೆ. ಇವರು ಕೈದಿಗಳಿಗೆ ಡ್ರಗ್ಸ್ ಪೂರೈಸಿದ್ದಾರೆಯೇ ಎಂಬ ಅನುಮಾನದಿಂದ ಆ ಇಬ್ಬರು ಮಾಡಿದವರನ್ನ ಬೆನ್ನಟ್ಟಲು ಮುಂದಾಗಿದ್ದಾರೆ ಕವಿತಾ ಸನಿಲ್. ಆದರೆ ಕ್ಷಣ ಮಾತ್ರದಲ್ಲಿ ಆಗಂತುಕರು ತಪ್ಪಿಸಿಕೊಂಡಿದ್ದಾರೆ. ಸ್ಥಳಕ್ಕೆ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ದೌಡಾಯಿಸಿ ಜೈಲರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಹೊರಗಿನಿಂದ ಬಿಸಾಡಿದ ವಸ್ತುವನ್ನು ಒಬ್ಬ ಕೈದಿ ತೆಗೆದುಕೊಂಡಿದ್ದಾನೆ. ಪರಿಶೀಲನೆ ನಡೆಸಿದಾಗ ಅದು ಚಹಾ ಹಾಗೂ ಸಿಗರೇಟ್ ಎಂದು ಒಪ್ಪಿಕೊಂಡಿದ್ದಾನೆ ಎಂದು ಜೈಲಿನ ಮುಖ್ಯ ಅಧೀಕ್ಷಕ ಆಶೆಖಾನ್ ಹೇಳಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಜೈಲಾಧಿಕಾರಿ ದೂರು ನೀಡಿದ್ದಾರೆ.