ಮಂಗಳೂರು: ಮುಡಾ ಹಗರಣದ ದೂರದಾರರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗೆ ಪ್ರಾಣಿಬಲಿ ರಕ್ತ ಲೇಪಿಸಿ ವಾಮಾಚಾರ ನಡೆಸಿದ ವಿಡಿಯೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿಯಾದ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಪತ್ನಿಯಾದ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಅವರ ಹೆಸರೂ ಕೂಡ ಪ್ರಕರಣದಲ್ಲಿ ಹರಿದಾಡುತ್ತಿದೆ. ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲಿನ ದಾಳಿ ಪ್ರಕರಣದಲ್ಲಿ ವಾರದ ಹಿಂದೆ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಪ್ರಸಾದ್ ಮೊಬೈಲ್ ಪರಿಶೀಲಿಸಿದಾಗ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರಿಗೆ ಬಲ ತುಂಬಲು 5 ಕುರಿಗಳನ್ನುಕಾಳಿಗೆ ಬಲಿ ಕೊಟ್ಟಿರುವ ವಿಡಿಯೋ ಪತ್ತೆಯಾಗಿರುವುದು ವರದಿಯಾಗಿತ್ತು. ಆ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಪ್ರಮುಖ ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಪರವಾಗಿ ಪ್ರಸಾದ್ ಅತ್ತಾವರ ಆಪ್ತರು ವಾಮಾಚಾರ ನಡೆಸಿರುವುದು ಮತ್ತು ಅದರಲ್ಲಿ ಆತನ ಪತ್ನಿಯಾದ ಉಡುಪಿ ಮಹಿಳಾ ಪೊಲೀಸ್ ಠಾಣೆ ಪಿಎಸ್‌ಐ ಆದ ಸುಮಾ ಆಚಾರ್ಯ ಕೂಡ ಭಾಗಿಯಾಗಿರುವ ಸಂಗತಿ ತಿಳಿದುಬಂದಿದೆ. ಆ ಮೂಲಕ ಪ್ರಾಣಿ ಬಲಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಸಿದ್ದರಾಮಯ್ಯ ವಿರುದ್ದ ದೂರುದಾರರಿಗೆ ಬಲ ತುಂಬುವ ಯತ್ನವಾಗಿ ಪ್ರಸಾದ್ ಅತ್ತಾವರ ನೇತೃತ್ವದ ಕೆಲವರು ವಾಮಾಚಾರದ ಮೊರೆ ಹೋಗಿದ್ದಾರೆ ಎನ್ನಲಾಗಿತ್ತು.