image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಟೆಕಾರ್ ದರೋಡೆ ತನಿಖೆಯ ಪೂರ್ಣ ಮಾಹಿತಿ ನೀಡಿದ ಮಂಗಳೂರು ಪೊಲೀಸ್‌ ಕಮಿಷನ‌ರ್ ಅನುಪಮ್ ಅಗರ್ವಾಲ್

ಕೋಟೆಕಾರ್ ದರೋಡೆ ತನಿಖೆಯ ಪೂರ್ಣ ಮಾಹಿತಿ ನೀಡಿದ ಮಂಗಳೂರು ಪೊಲೀಸ್‌ ಕಮಿಷನ‌ರ್ ಅನುಪಮ್ ಅಗರ್ವಾಲ್

ಮಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ತನಿಖೆ ಬಗ್ಗೆ ಇಂದು ಮಂಗಳೂರು ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್ವಾಲ್ ಸಂಪೂರ್ಣ ಮಾಹಿತಿ ನೀಡಿದರು. ಕಮಿಷನರ್ ಆಫೀಸಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು, ಜ.17 ರಂದು ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ನಡೆದಿತ್ತು.

ನಾಲ್ಕು ಜನ ಆರೋಪಿಗಳು ಬ್ಯಾಂಕ್ ಪ್ರವೇಶಿಸಿ ದರೋಡೆ ಮಾಡಿದ್ದರು. 18 ಕೆ.ಜಿ ಚಿನ್ನ ಸಹಿತ 11 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದೆವು. ಪ್ರಾರಂಭಿಕ ಹಂತದಲ್ಲಿ ತನಿಖೆ ವೇಳೆ ನಮ್ಮ ಬಳಿ ಯಾವುದೇ ಸುಳಿವು ಇರಲಿಲ್ಲ. ಎಸಿಪಿ ಧನ್ಯಾ ನಾಯಕ್, ಸಿಸಿಬಿ ಎಸಿಪಿ ಮನೋಜ್ ನೇತೃತ್ವದ ತಂಡ ಕೆಲಸ ಮಾಡಿತ್ತು. ಫಿಯೇಟ್ ಕಾರಿನ ಆಧಾರದಲ್ಲಿ ನಾವು ಮೊದಲು ತನಿಖೆ ನಡೆಸಿದವು. ಎಲ್ಲಾ ಟೋಲ್‌, ಸಿಸಿಟಿವಿ ಆಧಾರದಲ್ಲಿ ತನಿಖೆ ಮಾಡಿದಾಗ ಫಿಯೇಟ್ ಕಾರು ರೂಟ್ ಸಿಕ್ಕಿತು. ಸುರತ್ಕಲ್ ಬಳಿಯ ಪೆಟ್ರೋಲ್ ಪಂಪೊಂದರ ಸಿಸಿಟಿವಿಯಲ್ಲಿ ಸುಳಿವು ಸಿಕ್ಕಿತು. ಇವರು ಮಹಾರಾಷ್ಟ್ರ ನಂಬ‌ರ್ ಪ್ಲೇಟ್ ಬದಲಿಸಿದ ಸುಳಿವು ಕೂಡ ಸಿಕ್ಕಿತು. ತಕ್ಷಣ ನಮ್ಮ ತಂಡ ಮುಂಬೈ ತೆರಳಿ ಅಲ್ಲಿ ತನಿಖೆ ಮಾಡಿ ಮಾಹಿತಿ ಕಲೆ ಹಾಕಲು ಪ್ರಾರಂಬಿಸಿತು ಎಂದರು.

ದರೋಡೆ ಬಳಿಕ ಇಬ್ಬರು ತಲಪಾಡಿ ಟೋಲ್ ಗೇಟ್ ಮೂಲಕ ತಪ್ಪಿಸಿಕೊಂಡಿದ್ದರು. ಮೊದಲು ಕಣ್ಣನ್ ಮಣಿಯನ್ನು ತಮಿಳುನಾಡಿನ ತಿರುವನ್ವೇಲಿಯಲ್ಲಿ ಬಂಧನ ಮಾಡಿದೆವು.  ಆತನ ವಿಚಾರಣೆ ಬಳಿಕ ತಿರುವನ್ವೇಲಿಯಲ್ಲಿ ಮುರುಗನ್ ಡಿ, ಯಶೋ ರಾಜೇಂದ್ರನ್ ಬಂಧನ ಮಾಡಿದೆವು. ಇದಾದ ಬಳಿಕ ಚಿನ್ನ ವಶಡಿಸಿಕೊಳ್ಳುವ ವಿಚಾರದಲ್ಲಿ ಸ್ಥಳೀಯ ಪೊಲೀಸರ ಸಹಕಾರ ಪಡೆದೆವು. ಬೆಳ್ಳಂಬೆಳಿಗ್ಗೆ ಸುರತ್ಕಲ್ ಪೊಲೀಸ್ ಇನ್ಸೆಕ್ಟರ್ ಮಹೇಶ್ ಪ್ರಸಾದ್ ಅವರ ತಂಡ ಮುರುಗನ್ ಡಿ ತಂದೆ ಮನೆಗೆ ದಾಳಿ ಮಾಡಿದರು. ಅಲ್ಲಿ ಆತನ ತಂದೆ ಷಣ್ಮುಗ ಸುಂದರಂ ಬಂಧಿಸಿ ಚಿನ್ನ ವಶಕ್ಕೆ ಪಡೆದೆವು. ಮೊದಲು ಬಂಧಿಸಿದ್ದ ಇಬ್ಬರಲ್ಲಿ ಎರಡು ಕೆ.ಜಿ ಚಿನ್ನ ಮಾತ್ರ ಸಿಕ್ಕಿತ್ತು. ಸದ್ಯ ಒಟ್ಟು 18.300 ಕೆ.ಜಿ ಚಿನ್ನ ಪೂರ್ಣವಾಗಿ ಮರಳಿಪಡೆಯಲಾಗಿದೆ. ದರೋಡೆಗೈದ 11 ಲಕ್ಷ ಹಣದಲ್ಲಿ 3 ಲಕ್ಷ ರೂ. ಸಿಕ್ಕಿದೆ ಎಂದರು.

ಶುಕ್ರವಾರ ಮಸೀದಿ ಪ್ರಾರ್ಥನೆ ಹೊತ್ತಲ್ಲೇ ದರೋಡೆಗೆ ಪ್ಲಾನ್

2016ರಲ್ಲಿ ಮಹಾರಾಷ್ಟ್ರ ಜೈಲಿನಲ್ಲಿ ಕಣ್ಣನ್ ಮಣಿ ಹಾಗೂ ಮುರುಗನ್ ಡಿ ಪರಿಚಯ ಆಗಿತ್ತು. ಸ್ಥಳೀಯ ಶಶಿ ಥೇವರ್ ಎಂಬಾತನ ಪರಿಚಯವಾಗಿ ಆತ ಕೋಟೆಕಾರು ಬ್ಯಾಂಕ್ ಮಾಹಿತಿ ಕೊಟ್ಟಿದ್ದ. ಶಶಿ ಥೇವರ್ ನನ್ನು ಮುರುಗನ್ ಭೇಟಿಯಾಗಿ ಮಾಹಿತಿ ಪಡೆದಿದ್ದಾನೆ. ಆರು ತಿಂಗಳಲ್ಲಿ ಮೂರು ಬಾರಿ ಮುರುಗನ್ ಡಿ ಮಂಗಳೂರು ಬಂದಿದ್ದು, ನ.27ರಂದು ಮುರುಗನ್ ಡಿ, ರಾಜೇಂದ್ರ ಜೊತೆ ಮಂಗಳೂರಿಗೆ ಬಂದಿದ್ದ. ಆಗ ಶಶಿ ಥೇವರ್‌ ಇಲ್ಲಿ ಅವರಿಗೆ ಎಲ್ಲಾ ಎಂಟ್ರಿ - ಎಕ್ಸಿಟ್ ಪಾಯಿಂಟ್ ತಿಳಿಸಿದ್ದ. ಆಟೋದಲ್ಲಿ ಕರೆದುಕೊಂಡು ಹೋಗಿ ಬ್ಯಾಂಕ್ ಹಾಗೂ ಇತರ ಜಾಗಗಳನ್ನು ತೋರಿಸಿದ್ದ. ಶುಕ್ರವಾರ ಮಸೀದಿ ಪ್ರಾರ್ಥನೆ ಹೊತ್ತಲ್ಲೇ ದರೋಡೆಗೆ ಪ್ಲಾನ್ ಹಾಕಿದ್ದರು. ಮುಂಬೈನಿಂದ ಫಿಯೇಟ್ ಕಾರಿನಲ್ಲಿ ಬಂದ ಆರೋಪಿಗಳು ಒಂದು ಜಾಗದಲ್ಲಿ ಸೇರಿಕೊಂಡು ಪ್ಲಾನ್ ಮಾಡಿದ್ದರು ಎಂದು ಕಮಿಷನ‌ರ್ ಮಾಹಿತಿ ನೀಡಿದರು.

ಇದರಲ್ಲಿ ಮೊದಲು ಕಾರಿನ ಒರಿಜಿನಲ್ ನಂಬ‌ರ್ ಪ್ಲೇಟ್ ಟ್ರೇಸ್ ಮಾಡಿದ್ದು ದೊಡ್ಡ ಸುಳಿವು ನೀಡಿದೆ. ಸದ್ಯ ಮೂವರು ಆರೋಪಿಗಳು ಉತ್ತರ ಭಾರತ ಕಡೆ ಹೋಗಿದ್ದಾರೆ. ನಮಗೆ ಅವರ ಮಾಹಿತಿ ಸಿಕ್ಕಿದೆ, ಶೀಘ್ರವೇ ಬಂಧನವಾಗುತ್ತದೆ. ಸ್ಥಳೀಯ ಶಶಿ ಥೇವರ್ ಸೇರಿ ನಾಲ್ವರ ಬಂಧನವಾಗಬೇಕಿದೆ. ಶಶಿ ಥೇವರ್ ಗೆ ಮಂಗಳೂರು ಚೆನ್ನಾಗಿ ಗೊತ್ತಿದೆ, ಇಲ್ಲೇ ಇದ್ದವನು ಎಂದು ಮುರುಗಂಡಿ ಹೇಳಿದ್ದಾನೆ. ಆದರೆ ಆತ ಮೂಲತಃ ಮುಂಬೈ ಮೂಲದವನು ಎಂಬ ಮಾಹಿತಿ ಇದೆ. ಮುರುಗನ್ ಡಿ ಮುಂಬೈನಲ್ಲೂ ದರೋಡೆ ಮಾಡಿ 27 ಕೆ.ಜಿ ಚಿನ್ನ ಲೂಟಿ ಮಾಡಿದ್ದ. ಯಶೋ ರಾಜೇಂದ್ರ ಮೇಲೆ ಡಕಾಯಿತಿ ಹಾಗೂ ಕೋಕಾ ಕೇಸ್ ಇದೆ.

ಮುಂಬೈ ಹಾಗೂ ತಮಿಳುನಾಡು ಪೊಲೀಸರು ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ತಮಿಳು ಬರುವ ನಮ್ಮ ಕೆಲವು ಸಿಬ್ಬಂದಿ ನಮಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕಮಿಷನರ್ ಅಗರ್ವಾಲ್ ಹೇಳಿದರು.

Category
ಕರಾವಳಿ ತರಂಗಿಣಿ