ಬಂಟ್ವಾಳ: ಬಿ.ಸಿ. ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆಗೆ ಸಂಬಂಧಿಸಿ ಚಾಲಕ ನೀಡಿದ ದೂರಿನಂತೆ ಟೋಲ್ ಸಿಬಂದಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕ ಸಕಲೇಶಪುರ ತಾಲೂಕಿನ ಮಾರ್ನಹಳ್ಳಿ ಹೆಗ್ಗದ್ದೆ ನಿವಾಸಿ ಸಂಜಯ ಅವರು ದೂರು ನೀಡಿದ್ದು, ಜ.17ರಂದು ತಾನು ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಸಂಜೆ 6ರ ಸುಮಾರಿಗೆ ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಇಲ್ಲದೆ ಟೋಲ್ ಶುಲ್ಕ ಕಡಿತವಾಗದೇ ಇರುವುದಕ್ಕೆ ಸಿಬಂದಿ ಕೋಪಗೊಂಡು ಲಾರಿಯನ್ನು ಅಡ್ಡಗಟ್ಟಿ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.