ಸುರತ್ಕಲ್: ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ಕು ಮಂದಿ ಯುವಕರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಸಿದ ಘಟನೆ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಇಂದು ವರದಿಯಾಗಿದೆ.
ಮೃತರನ್ನು ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಶಿವಲಿಂಗಪ್ಪ ಎಂಬವರ ಪುತ್ರ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ (30), ಬೆಂಗಳೂರು ಜೆ.ಪಿ.ನಗರ ನಿವಾಸಿ ಸತ್ಯವೇಲು (30) ಎಂದು ತಿಳಿದು ಬಂದಿದ್ದು, ಬೀದರ್ ಜಿಲ್ಲೆಯ ಹಂಗಾರಗಾ ನಿವಾಸಿ ವಿಶ್ವಂಬರ್ ಎಂಬವರ ಪುತ್ರ ಪರಮೇಶ್ವರ್ (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಶಿವಕುಮಾರ್, ಸತ್ಯವೇಲು ಮತ್ತು ಮಂಜುನಾಥ್ ಅವರ ಮೃತದೇಹ ಜೆಟ್ಟಿಯ ಹತ್ತಿರ ಪತ್ತೆಯಾಗಿದ್ದು, ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಾಲ್ವರು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಇಂದು ಬೆಳಗ್ಗೆ ಮಂಗಳೂರಿಗೆ ತಲುಪಿದ್ದರು. ಮಂಗಳೂರಿನ ಹೊಟೇಲ್‌ವೊಂದರಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಬಳಿಕ ಮಧ್ಯಾಹ್ನದ ವೇಳೆಗೆ ಕುಳಾಯಿಜೆಟ್ಟಿ ಬಳಿಗೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಸಮುದ್ರಕ್ಕೆ ಇಳಿದು ಆಡುತ್ತಿದ್ದ ಸಂದರ್ಭ ನಾಲ್ವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ನಾಲ್ವರ ರಕ್ಷಣೆಗೆ ಮುಂದಾದರಾದರೂ ಅಷ್ಟರಲ್ಲೇ ಮೂವರು ನೀರು ಪಾಲಾಗಿದ್ದರು. ಓರ್ವ ಪಾರಾಗಿದ್ದಾನೆ.