ತುಮಕೂರು : ದೂರು ನೀಡಲು ಬಂದಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಈಗ ಜೈಲು ಪಾಲಾಗಿರುವ ಡಿವೈಎಸ್‌ಪಿ ರಾಮಚಂದ್ರಪ್ಪನ ನೀಚಕೃತ್ಯಗಳು ಒಂದೊಂದಾಗಿ ಬಯಲಾಗುತ್ತದೆ. ಈಗ ಮತ್ತೊಬ್ಬ ಮಹಿಳೆ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಹೊರಬಿಟ್ಟಿದ್ದು, ತನ್ನ ಮೇಲೆ ನಡೆದ ಕೃತ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ವಿಡಿಯೋದ ಪ್ರಕಾರ," ನೀವು ನನ್ನ ತಂದೆಯಂತೆ, ನನ್ನನ್ನು ನಿಮ್ಮ ಮಗಳೆಂದು ಭಾವಿಸಿ ಎಂದು ಗೋಗರೆದು ಕೇಳಿಕೊಂಡರೂ ರಾಮಚಂದ್ರಪ್ಪ ತನ್ನ ಕಾಮುಕ ಬುದ್ದಿಯನ್ನು ಬಿಡಲಿಲ್ಲ. ತನ್ನ ಖಾಸಗಿ ಅಂಗಗಳನ್ನು ಮುಟ್ಟಿ ನೀಚತನ ಪ್ರದರ್ಶಿಸಿದ ಎಂದು ಮಹಿಳೆ ಅವಲತ್ತುಕೊಂಡಿದ್ದಾರೆ.
ಫೇಸ್ ಬುಕ್ ಗೆಳೆಯನೋರ್ವನಿಂದ ಲಕ್ಷಾಂತರ ರೂ. ವಂಚನೆಗೊಳಗಾಗಿದ್ದ ಮಹಿಳೆ ತನ್ನ ಹಣವನ್ನು ವಾಪಸ್ ಕೊಡಿಸುವಂತೆ ದೂರು ನೀಡಿದ್ದರು. ಈ ದೂರನ್ನು ಆಲಿಸಿ ಡಿವೈಎಸ್‌ಪಿ ರಾಮಚಂದ್ರಪ್ಪ ತನ್ನ ಕಚೇರಿಗೆ ಕರೆಸಿಕೊಂಡಿದ್ದ. ಗಂಡನನ್ನು ಹೊರಗೆ ಕೂರಿಸಿ ಹೆಂಡತಿಯನ್ನು ಮಾತ್ರ ಒಳಗೆ ಕರೆಸಿಕೊಂಡಿದ್ದ ಆತ, ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಹೆದರಿದ್ದ ಮಹಿಳೆ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಬಳಿಕ ಕಾಲು ಹಿಡಿದು ಆತನನ್ನು ಬೇಡಿಕೊಂಡರೂ ಸಹ ತನ್ನ ಕೃತ್ಯ ಮುಂದುವರೆಸಿ ಬಳಿಕ ಯಾರಲ್ಲೂ ಬಾಯಿ ಬಿಡದಂತೆ 500 ರೂ. ನೀಡಲು ಮುಂದಾಗಿದ್ದ. ಹೆದರಿದ್ದ ಮಹಿಳೆ ಕಿರುಚಿಕೊಂಡು ಹೊರಗೋಡಿ ಬಂದು ತನ್ನ ಗಂಡನ ಬಳಿ ಈ ಕೃತ್ಯವನ್ನು ಹೇಳಿಕೊಂಡಿದ್ದರು. ಬಳಿಕ ದಂಪತಿಗಳು ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟು ಹಣದ ಆಸೆಯನ್ನೂ ಸಹ ಮರೆತಿದ್ದರು.
ಈ ಸಂಪೂರ್ಣ ಘಟನೆಯನ್ನು ವಿವರಗಳೊಂದಿಗೆ ಮಹಿಳೆ ವಿಡಿಯೋ ಮಾಡಿ ಹೊರಬಿಟ್ಟಿದ್ದು, ಈಗ ರಾಮಚಂದ್ರಪ್ಪನ ಮೇಲೆ ಮತ್ತೊಂದು ದೂರು ದಾಖಲಾಗುವ ಸಾಧ್ಯತೆಯಿದೆ.