ಕುಂದಾಪುರ: ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್ ಬೋಟ್ ಮಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಟೀ ರೈಡರ್ ನಾಪತ್ತೆಯಾದ ಘಟನೆ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಜೆಟ್ ರೈಡರ್ ರೋಹಿದಾಸ್ ಅಲಿಯಾಸ್ ರವಿ (45) ನಾಪತ್ತೆಯಾಗಿದ್ದು, ಬೆಂಗಳೂರಿನ ಪ್ರವಾಸಿಗನನ್ನು ರಕ್ಷಸಲಾಗಿದೆ. ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್ ಬೋಟ್‌ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕಿ ಮಗುಚಿ ಬಿದ್ದಿತ್ತು. ರೈಡ್‌ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ.
ಮುರ್ಡೇಶ್ವರ ನಿವಾಸಿಯಾದ ರೋಹಿದಾಸ್ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ ಸ್ಕಿ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು.ಶೋಧ ಕಾರ್ಯ ನಡೆಯುತ್ತಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಪೊಲೀಸ್ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.