ಮಂಗಳೂರು: ಅಪ್ರಾಪ್ತೆ ಹಾಗೂ ವಿವಾಹಿತೆ ಸ್ನಾನ ಮಾಡುತ್ತಿರುವುನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1 (ಪೋಕ್ಸ್) ನ್ಯಾಯಾಲಯ ಅಪರಾಧಿಗೆ 5ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 15ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮಂಗಳೂರಿನ ಸ್ಯಾಂಡ್ ಪಿಟ್ ಬೆಂಗ್ರೆ ನಿವಾಸಿ ಮುಹಮ್ಮದ್ ರಂಶೀದ್ ಶಿಕ್ಷೆಗೊಳಗಾದ ಅಪರಾಧಿ. 2024ರ ಜು.5 ಮತ್ತು 7ರಂದು ರಾತ್ರಿ ಆರೋಪಿ ರಂಶೀದ್ ಅಪ್ರಾಪ್ತೆ ಮತ್ತು ವಿವಾಹಿತೆ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊ ಚಿತ್ರೀಕರಿಸಿದ್ದನು. ಜು.16ರಂದು ಇನ್ನೊಂದು ಮನೆಯ ಟೆರೇಸ್ ಮೇಲೆ ವೀಡಿಯೊ ಮಾಡುವ ಉದ್ದೇಶದಿಂದ ಹೋಗಿದ್ದಾನೆ. ಆ ಮನೆಯವರು ಗಮನಿಸಿದ್ದರಿಂದ ಈತ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದ್ದು, ಮನೆಯವರು ಆತನನ್ನು ಪತ್ತೆ ಹಚ್ಚಿ ಆತನ ಮೂಲಕವೇ ಮೊಬೈಲ್ ಲಾಕ್ ತೆಗೆಸಿ ನೋಡಿದಾಗ ಬಾತ್‌ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೊ ಪತ್ತೆಯಾಗಿದೆ. ಮಹಿಳೆ ನೀಡಿರುವ ದೂರಿನಂತೆ ಆತನ ವಿರುದ್ಧ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಭಾಗಶಃ ತನಿಖೆಯನ್ನು ಪಣಂಬೂರು ಠಾಣೆಯ ಪಿಎಸ್‌ಐ ರಾಘವೇಂದ್ರ ಮಾಡಿದ್ದು, ಪಿಎಸ್‌ಐ ಶ್ರೀಕಲಾ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 (ಪೋಕ್ಸ್) ನ್ಯಾಯಾಲಯ ವಾದವಿವಾದವನ್ನು ಆಲಿಸಿತ್ತು. ರಂಶೀದ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿನಯ್ ದೇವರಾಜ್ ಅವರು ಬಿಎನ್‌ಎಸ್ ಸೆಕ್ಷನ್329 (3) ರಡಿ 3 ತಿಂಗಳ ಸಾಮಾನ್ಯ ಕಾರಾಗೃಹ ಶಿಕ್ಷೆ, ಸೆಕ್ಷನ್ 329(4)ರಡಿ 1ವರ್ಷ ಸಾಮಾನ್ಯ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 2 ತಿಂಗಳು ಹೆಚ್ಚುವರಿ ಕಾರಾಗೃಹ ಶಿಕ್ಷೆ, ಪೋಕ್ಸ್ ಕಾಯ್ದೆ ಕಲಂ 14ರಡಿ 5 ವರ್ಷಗಳ ಸಾಮಾನ್ಯ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ. ದಂಡ ಕಟ್ಟಲು ತಪ್ಪಿದಲ್ಲಿ 1 ವರ್ಷ ಹೆಚ್ಚು ವರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಸಂತ್ರಸ್ತರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು.