ಪುತ್ತೂರು: ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ನಡೆದಿದೆ.
ಭಕ್ತಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಕಿಶೋರ್ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದ್ದು, ಕಿಶೋರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಿಶೋರ್ ಅವರ ಪತ್ನಿ ಚಂದ್ರಾವತಿ ಮತ್ತು ಪುತ್ರಿ ಬೆಳಿಗ್ಗೆ ಗಂಟೆ 10-30ಕ್ಕೆ ಪುತ್ತೂರಿಗೆ ಆಸ್ಪತ್ರೆಗೆ ಹೋಗಿ, ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕಿಶೋರ್ ಅವರ ಮನೆಯ ಮುಂಭಾಗದ ಒಂದು ಕೋಣೆಯಲ್ಲಿ ಅಂಗಡಿ ಮಾಡಿಕೊಂಡಿದ್ದು ಹಿಂಭಾಗದಲ್ಲಿ ಇವರು ವಾಸವಾಗಿದ್ದಾರೆ. ಮನೆಯ ಹಿಂಬಾಗಿಲನ್ನು ಮೀಟಿ ಒಳನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಾರೆ
ಕಳ್ಳರು ಮನೆಯೊಳಗಿದ್ದ ಗೋದ್ರೆಜ್ ಬಾಗಿಲನ್ನು ಮುರಿದು ಗೋದ್ರೆಜ್ ನಲ್ಲಿದ್ದ 11 ಪವನ್ ಚಿನ್ನಾಭರಣ ಹಾಗೂ ರೂ.20 ಸಾವಿರ ನಗದು ಹಣವನ್ನು ದೋಚಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.