ಮಂಗಳೂರು: ನಾಲ್ಕು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಜೀವಾವಧಿ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಯಾನೆ ಸಚಿನ್ ಯಾನೆ ನವೀನ್ ಶಿಕ್ಷೆಗೊಳಗಾದ ಅರೋಪಿಗಳಾಗಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಗ್ರಾಮದ ವನಭೋಜನ ಎಂಬಲ್ಲಿ 2020ರ ಜನವರಿ 30ರಂದು ರಾತ್ರಿ 10ಕ್ಕೆ ಶರಣಪ್ಪ (31) ಎಂಬಾತನ ಕುತ್ತಿಗೆಗೆ ಚೂರಿಯಿಂದ ಚುಚ್ಚಿ ಕೊಲೆಗೈದಿದ್ದರು. ಶರಣಪ್ಪನು ಆರೋಪಿಗಳು ಮತ್ತವರ ಹೆತ್ತವರಿಗೆ ಅವಾಚ್ಯ ಶಬ್ದದಿಂದ ಬೈದಿದ್ದಾನೆ ಎಂದು ಕೋಪದಿಂದ ಈ ಕೃತ್ಯ ಎಸಗಿದ್ದರು.
ಅಂದಿನ ಮುಲ್ಕಿ ಠಾಣೆಯ ಇನ್‌ಸ್ಪೆಕ್ಟರ್ ಜಯರಾಮ್ ಗೌಡ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎಸ್ಸೆ ಉಮೇಶ್ ತನಿಖೆಗೆ ಸಹಕರಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ ಸೆ.302 ಐಪಿಸಿ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 34 1ಐಪಿಸಿ ಪ್ರಕಾರ 1 ತಿಂಗಳ ಸಾದಾ ಸಜೆ ಮತ್ತು ತಲಾ 500 ರೂ. ದಂಡ ವಿಧಿಸಿದ್ದಾರೆ.ಸರಕಾರದ ಪರವಾಗಿ ಅಭಿಯೋಜಕ ಮೊತಿಲಾಲ್ ಚೌದರಿ ವಾದ ಮಂಡಿಸಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.