image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಜ್ಜಿಯ ಹೆಸರಲ್ಲಿದ್ದ ಆಸ್ತಿ ಪಹಣಿಯಲ್ಲಿ ಮೊಮ್ಮಗನ ಹೆಸರು ಸೇರಿಸಲು‌ ಲಂಚ ಕೇಳಿದ ಕಂದಾಯ ನಿರೀಕ್ಷಕ ಲೋಕಾಯುಕ್ತರ ಬಲೆಗೆ

ಅಜ್ಜಿಯ ಹೆಸರಲ್ಲಿದ್ದ ಆಸ್ತಿ ಪಹಣಿಯಲ್ಲಿ ಮೊಮ್ಮಗನ ಹೆಸರು ಸೇರಿಸಲು‌ ಲಂಚ ಕೇಳಿದ ಕಂದಾಯ ನಿರೀಕ್ಷಕ ಲೋಕಾಯುಕ್ತರ ಬಲೆಗೆ

ಮಂಗಳೂರು: ಪಿರ್ಯಾದಿದಾರರ ಅಜ್ಜಿ ಪದ್ಮಾವತಿ ರವರು ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ಪಿರ್ಯಾದಿದಾರರು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ ರವರ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಿದ್ದು, ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ರವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದು ಈ ಬಗ್ಗೆ ಪಿರ್ಯಾದಿದಾರರು ದಿನಾಂಕ: 09-12-2024 ರಂದು ಅರ್ಜಿಯ ಬಗ್ಗೆ ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲಾಗಿ ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ರವರು ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು ರೂ 4 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಪಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅದರಂತೆ  ಬೆಳಿಗ್ಗೆ ಮುಲ್ಕಿಯ ಕಂದಾಯ ನಿರೀಕ್ಷಕರಾದ ಶ್ರೀ ಜಿ.ಎಸ್ ದಿನೇಶ್  ಪಿರ್ಯಾದಿದಾರರಿಂದ. ರೂ. 4 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಸುರತ್ಕಲ್ ಜಂಕ್ಷನ್ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಎಂ.ಎ ನಟರಾಜ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ, ಮಂಗಳೂರು ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ॥ ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಶ್ರೀ ಅಮಾನುಲ್ಲಾ.ಎ, ಶ್ರೀ ಸುರೇಶ್ ಕುಮಾರ್ ಪಿ, ಶ್ರೀ ಚಂದ್ರಶೇಖರ್ ಕೆ.ಎನ್ ಇವರು ಸಿಬ್ಬಂದಿಗಳ ಜೊತೆ ಟ್ರಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ