ಮಂಗಳೂರು: ನಗರದ ಹೊರವಲಯದ ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಫಜೀರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಲಪಾಡಿ ಮರಿಯ ಚರ್ಚ್ ಕಂಪೌಂಡ್ ನಿವಾಸಿ ಗೌತಮ್ (22), ಕುಂಪಲ ಹನುಮಾನ್ ಟೆಂಪಲ್ ಹತ್ತಿರದ ನಿವಾಸಿ ಕಾರ್ತಿಕ್ (27), ಉಳ್ಳಾಲ, ತೊಕ್ಕೊಟ್ಟು ಒಳಪೇಟೆ ನಿವಾಸಿ ನಿಖಿಲ್(28) ಬಂಧಿತ ಆರೋಪಿಗಳು.
ಆರೋಪಿಗಳು ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಆ್ಯಂಟಿ ಡ್ರಗ್ ಟೀಂ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿತರಿಂದ ಸುಮಾರು 50 ಗ್ರಾಂ ತೂಕದ 1,50,000 ರೂ. ಅಂದಾಜು ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಮಾದಕದ್ರವ್ಯ ಮಾರಾಟಕ್ಕೆ ಉಪಯೋಗಿಸಿದ ಬಲೆನೋ ಕಾರು ಮತ್ತು 3 ಮೊಬೈಲ್ ಫೋನ್‌ಗಳನ್ನು ಮತ್ತು ಡಿಜಿಟಲ್ ತೂಕ ಮಾಪನ ಹಾಗೂ ಗಾಜಿನ ನಳಿಕೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 7.76.980 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.