ಗುಜರಾತ್: ಸಾಗರ - ಮಂಥನ ಕಾರ್ಯಾಚರಣೆ ಭಾಗವಾಗಿ ಈ ವಾರ ಎನ್ಸಿಬಿ, ನೌಕಾಪಡೆ ಹಾಗೂ ಎಟಿಎಸ್ ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಪೋರ್ಬಂದರ್ ಸಮುದ್ರದ ಪ್ರಾದೇಶಿಕ ಜಲಪ್ರದೇಶದಲ್ಲಿ ಸುಮಾರು 700 ಕೆ.ಜಿ ಮೆಥ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಅದಲ್ಲದೇ ಕಾರ್ಯಾಚರಣೆ ವೇಳೆ ಇರಾನಿಯನ್ನರು ಎಂದು ಹೇಳಿಕೊಳ್ಳುವ 8 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾದಕ ದ್ರವ್ಯ ಮುಕ್ತ ಭಾರತದ ದೃಷ್ಟಿಕೋನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಗಮನಾರ್ಹ ಯಶಸ್ಸು ಸಾಧಿಸಿವೆ. 700 ಕೆ.ಜಿ.ಮೆಥ್ ಎಂಬ ಮಾದಕವಸ್ತು ಸಾಗಿಸುತ್ತಿದ್ದ ಬೋಟ್ ಅನ್ನು ಭಾರತದ ಪ್ರಾದೇಶಿಕ ಜಲಪ್ರದೇಶದಲ್ಲಿ ಪೊಲೀಸ್ ತಂಡಗಳು ತಡೆ ಹಿಡಿದಿವೆ. ಯಾವುದೇ ಗುರತಿನ ದಾಖಲೆಗಳಿಲ್ಲದೇ ಬೋಟ್ನಲ್ಲಿ ಪತ್ತೆಯಾದ 8 ವಿದೇಶಿ ಪ್ರಜೆಗಳು ಇರಾನಿಯನ್ನರು ಎಂದು ಹೇಳಿಕೊಂಡಿದ್ದಾರೆ.
ಯಾವುದೇ ಎಐಎಸ್ ನೋಂದಣಿ ಇಲ್ಲದ ಬೋಟ್ ಒಂದು, ಮಾದಕ ದ್ರವ್ಯಗಳು/ಸೈಕೋಟ್ರೋಪಿಕ್ ಪದಾರ್ಥಗಳೊಂದಿಗೆ ಜಲಮಾರ್ಗವಾಗಿ ಭಾರತವನ್ನು ಪ್ರವೇಶಿಸುತ್ತಿರುವ ಗುಪ್ತಚರ ಖಚಿತ ಮಾಹಿತಿಯ ಮೇರೆಗೆ 'ಸಾಗರ-ಮಂಥನ- 4' ಕಾರ್ಯಾಚರಣೆ ಕೈಗೊಳ್ಳಲಾಯಿತು. ಭಾರತೀಯ ನೌಕಾಪಡೆ ಬೋಟ್ ಅನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿತು.
ಡ್ರಗ್ ಸಿಂಡಿಕೇಟ್ನ ಹಿಂದೆ ಹಾಗೂ ಮುಂದಿರುವ ಲಿಂಕ್ಗಳನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಇದಕ್ಕಾಗಿ ವಿದೇಶಿ DLEA ಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಪೊಲೀಸ್ ತಿಳಿಸಿದೆ.
"ಸಾಗರ-ಮಂಥನ" ಕಾರ್ಯಾಚರಣೆಯನ್ನು NCB ಈ ವರ್ಷದ ಆರಂಭದಲ್ಲಿ NCB ಹೆಡ್‌ಕ್ವಾರ್ಟರ್‌ನ ಕಾರ್ಯಾಚರಣೆ ಶಾಖೆಯ ಅಧಿಕಾರಿಗಳು ಮತ್ತು ಭಾರತೀಯ ನೌಕಾಪಡೆಯ ಗುಪ್ತಚರ ವಿಭಾಗದ ಅಧಿಕಾರಿಗಳು, ಭಾರತೀಯ ಕೋಸ್ಟ್ ಗಾರ್ಡ್, ಮತ್ತು ATS ಗುಜರಾತ್ ಪೊಲೀಸ್ ಸೇರಿಸಿ ತಂಡವನ್ನು ರಚಿಸುವ ಮೂಲಕ ಪ್ರಾರಂಭಿಸಿತು.