ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಬಾಣಂತಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಭವಿಸಿರುವುದು ವರದಿಯಾಗಿದೆ.
ಹೆಬ್ರಿ ಮುನಿಯಾಲಿನ ರಂಜಿತಾ ಅವರನ್ನು ಅ.24ರಂದು ಕಾರ್ಕಳದ ಆಸ್ಪತ್ರೆಯಿಂದ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು 27 ವಾರಗಳ ಗರ್ಭಿಣಿಯಾಗಿದ್ದು, ಅಧಿಕ ರಕ್ತದೊತ್ತಡ, ಮಧುಮೇಹ ಸಹಿತವಾಗಿ ಅವರ ಆರೋಗ್ಯ ತುಂಬಾ ಅಪಾಯದಲ್ಲಿತ್ತು ಎನ್ನಲಾಗಿದ್ದು, ಇಂತಹ ಸಂದರ್ಭ ಬಿಪಿ ನಿಯಂತ್ರಣಕ್ಕೆ ಬಾರದಿದ್ದಾಗ ತಾಯಿಯ ಜೀವ ಉಳಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅವರ ಜೀವಕ್ಕೆ ಅಪಾಯ ಇರುವ ಕಾರಣದಿಂದಾಗಿ ಅ.30ರಂದು ಸಿಸೇರಿಯನ್ ನಡೆಸಿ, ಹುಟ್ಟಿದ ಮಗು 960 ಗ್ರಾಂ ತೂಕ ಮಾತ್ರವಿತ್ತು. ಎನ್‌ಐಸಿಯುನಲ್ಲಿದ್ದ ಮಗು ನ.3ರಂದು ಮೃತಪಟ್ಟಿತ್ತು. ರಂಜಿತಾ ಕ್ರಮೇಣ ಗುಣಮುಖರಾಗಿದ್ದರಿಂದ ಸೋಮವಾರ ಆಸ್ಪತ್ರೆಯಿಂದ ಅವರ ಡಿಸ್ಟಾರ್ಜ್‌ಗೆ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ. ಅದರಂತೆ ರಂಜಿತಾ ಅವರ ಮನೆಯವರು ಆಕೆಯನ್ನು ಕರೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದು, ನಾಲ್ಕನೇ ಮಹಡಿಯ ವಾರ್ಡ್‌ನಲ್ಲಿದ್ದ ರಂಜಿತಾ ಮನೆ ಮಂದಿ ಇರುವಾಗಲೇ ಮಂಚದ ಮೇಲೇರಿ ಕಿಟಕಿಯಿಂದ ಹಾರಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಂಜಿತಾ ಅವರು ತನ್ನ ಮಗು ಮೃತಪಟ್ಟಿರುವ ಕಾರಣದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.