ಉಳ್ಳಾಲ: ಜೈಲಿನಿಂದ ಬಿಡುಗಡೆ ಹೊಂದಿರುವ ವ್ಯಕ್ತಿಯ ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್, ಇಡ್ಯ, ಈಶ್ವರ ನಗರ ನಿವಾಸಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು(24), ತಲಪಾಡಿ, ನಾರ್ಲ ಪಡೀಲ್ ನಿವಾಸಿ ಸಚಿನ್(24), ಬಂಟ್ವಾಳ ತಾಲೂಕಿನ, ಪಜೀರ್ ಪೋಸ್ಟ್, ಕಂಬ್ಲಪದವು, ಪಾದಲ್ ಕೋಡಿ ನಿವಾಸಿ ಖುಷಿತ್(18) ಬಂಧಿತ ಆರೋಪಿಗಳು.
ನವಂಬರ್ 8ರಂದು ಸಂಜೆ 6.40ರ ಸುಮಾರಿಗೆ ತಲಪಾಡಿ ಗ್ರಾಮದ ಕೆ.ಸಿ.ರೋಡ್- ಉಚ್ಚಿಲ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಳೆಯ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ ಮೊಹಮದ್ ಆಸೀಫ್ ಎಂಬಾತ ತನ್ನ ಮನೆಯವರೊಂದಿಗೆ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಸಮಯ ಆರೋಪಿಗಳು ಮೊಹಮ್ಮದ್ ಆಸೀಫ್‌ರವರನ್ನು ಮಾರಕಾಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಮೊಹಮದ್ ಆಸೀಫ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ ನವೆಂಬರ್ 11ರಂದು ರಾತ್ರಿ 8ಗಂಟೆಗೆ ಬಂಧಿಸಿದ್ದಾರೆ.