ಜಮ್ಮು ಮತ್ತು ಕಾಶ್ಮೀರ : ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ವಾರ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ನಡೆದ ಉಗ್ರರ ದಾಳಿಯ ಸಂಪೂರ್ಣ ಸಂಚು ಬಯಲಾಗಿದ್ದು, ದಾಳಿಗೂ ಒಂದು ದಿನ ಮುನ್ನ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಲಾರೂ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಉಮರ್ ದಾರ್ ಹತನಾಗಿದ್ದು, ಗುಂಡಿನ ಚಕಮಕಿಯ ನಡುವೆ ಪರಾರಿಯಾಗಿರುವ ಲಷ್ಕರ್ ಕಮಾಂಡರ್ ಲತೀಫ್ ಭಟ್ನನ್ನು ಹಿಡಿಯಲು ಸೇನೆ, ಸಿಆರ್ಪಿಎಫ್ ಮತ್ತು ಪೊಲೀಸರ ಜಂಟಿ ತಂಡಗಳು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಸೇಬಿನ ತೋಟಗಳನ್ನು ಸುತ್ತುವರಿದು ಬೃಹತ್ ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ಪಡೆ ಶೋಧ ಆರಂಭಿಸಿದಾಗ, ಉಗ್ರರು ಸೇಬಿನ ತೋಟದ ಪಕ್ಕದಲ್ಲಿದ್ದ ಎರಡು ಶಾಲೆಗಳತ್ತ ಓಡಿದ್ದರು. ತಕ್ಷಣವೇ ಎಚ್ಚೆತ್ತ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು, ಶಾಲಾ ಕಟ್ಟಡಗಳು ಮತ್ತು ತೋಟದಲ್ಲಿದ್ದ ಎಲ್ಲಾ ಮಕ್ಕಳು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕಳುಹಿಸಿದ ನಂತರವೇ ಕಾರ್ಯಾಚರಣೆ ನಡೆಸಿವೆ. ನವೆಂಬರ್ 11ರಂದು ಅಖ್ರಾನ್ ಬಳಿಯ ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಇದೇ ದಿನ ಮನೆಗೆ ಮರಳದ ಕಾರಣ ಅರ್ರೆಹ್ ಗ್ರಾಮದ ಉಮರ್ ದಾರ್ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ನವೆಂಬರ್ 10ರಂದು ಮಿರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಪ್ರದೇಶಗಳಲ್ಲಿ ಇಬ್ಬರೂ ಸುತ್ತಾಡಿ ಸಂಚು ರೂಪಿಸಿದ್ದು ಹಾಗೂ ದಾಳಿಯ ಬಳಿಕ ಒಟ್ಟಿಗೆ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ತನಿಖೆಯಲ್ಲಿ ಅಸಲಿ ಸತ್ಯವನ್ನು ಬಯಲು ಮಾಡಿದೆ.
ಈ ಹಿಂದೆ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಉಮರ್ ದಾರ್, ಕಳೆದ ಐದಾರು ತಿಂಗಳಿನಿಂದ ಲಷ್ಕರ್ ಕಮಾಂಡರ್ ಲತೀಫ್ ಭಟ್ಗೆ ಆಶ್ರಯ ಹಾಗೂ ಎಲ್ಲಾ ರೀತಿಯ ನೆರವು ನೀಡುತ್ತಿದ್ದ ಎಂಬುದು ದೃಢಪಟ್ಟಿದೆ. ನವೆಂಬರ್ 11ರ ದಾಳಿಯ ಬಳಿಕ ಆತ ಅಧಿಕೃತವಾಗಿ 'ಟಿಆರ್ಎಫ್' ಉಗ್ರ ಸಂಘಟನೆಗೆ ಸೇರಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.