ಬಳ್ಳಾರಿ: ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ ಎಂದು ನಂಬಿಸಿ ಯುವತಿಯರನ್ನು ವಂಚಿಸಿ, ಲೈಂಗಿಕ ಶೋಷಣೆ ಹಾಗೂ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯ 'ಅಕ್ಕ ಪಡೆ' ಸತತ ಎರಡು ತಿಂಗಳ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ದಂಧೆಯಲ್ಲಿ ಸಿಲುಕಿದ್ದ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಹಾಗೂ ಮೂಢನಂಬಿಕೆಗಳನ್ನು ನಂಬುವ ಸುಂದರ ಮತ್ತು ಕನಿಷ್ಠ 5 ಅಡಿ 6 ಇಂಚು ಎತ್ತರವಿರುವ ಅವಿವಾಹಿತ ಯುವತಿಯರನ್ನೇ ಆರೋಪಿಗಳು ಗುರಿಯಾಗಿಸಿಕೊಳ್ಳುತ್ತಿದ್ದರು. ಆರಂಭದಲ್ಲಿ ಯುವತಿಯರ ಬಲಗೈ ಹಾಗೂ ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಪಡೆದುಕೊಳ್ಳುತ್ತಿದ್ದ ಜಾಲವು, ಪೂಜೆಯಿಂದ ಬರುವ ಹಣವನ್ನು ಯುವತಿ, ಸ್ವಾಮೀಜಿ ಮತ್ತು ಏಜೆಂಟ್ ನಡುವೆ ಸಮನಾಗಿ ಹಂಚಲಾಗುತ್ತದೆ ಎಂದು ಆಮಿಷವೊಡ್ಡುತ್ತಿತ್ತು. ಬಳಿಕ ಪೂಜೆಯ ನೆಪದಲ್ಲಿ ಕರೆಸಿಕೊಂಡು ಲೈಂಗಿಕವಾಗಿ ಶೋಷಿಸಿ, ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಅವರನ್ನು ವೇಶ್ಯಾವಾಟಿಕೆ ಹಾಗೂ ಮಹಿಳೆಯರ ಅಕ್ರಮ ಮಾರಾಟದ ದಂಧೆಗೆ ತಳ್ಳಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮಹಿಳೆಯೊಬ್ಬರು ನೀಡಿದ ಖಚಿತ ಮಾಹಿತಿಯ ಮೇರೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು, ಆರೋಪಿಗಳ ಸಂಪರ್ಕ ಜಾಲವನ್ನು ಪತ್ತೆಹಚ್ಚಲು 'ಅಕ್ಕ ಪಡೆ'ಯ ಸಿಬ್ಬಂದಿಯನ್ನು ಬಡ ಮಹಿಳೆಯರ ಸೋಗಿನಲ್ಲಿ ಕಳುಹಿಸಿದ್ದರು. ಎರಡು ತಿಂಗಳ ರಹಸ್ಯ ಕಾರ್ಯಾಚರಣೆಯ ಬಳಿಕ ದಾಳಿ ನಡೆಸಿ ಜಾಲವನ್ನು ಬಯಲಿಗೆಳೆಯಲಾಗಿದೆ. ಕರ್ನಾಟಕದ ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ಈ ಜಾಲವು ಪೊಲೀಸರ ಕಣ್ಣುತಪ್ಪಿಸಲು 'ಮೀಡಿಯಾ', 'ಪೇಪರ್' ಹಾಗೂ ಪ್ರಮುಖ ಸೂತ್ರಧಾರ ಸ್ವಾಮೀಜಿಗಾಗಿ 'ಡಿಆರ್‌ಎ' (DRA) ಎಂಬ ಕೋಡ್ ವರ್ಡ್‌ಗಳನ್ನು ಬಳಸುತ್ತಿತ್ತು. ಸದ್ಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸ್ವಾಮೀಜಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.