ಸುಬ್ರಹ್ಮಣ್ಯ: ವೈಯಕ್ತಿಕ ಕಾರಣಗಳಿಂದ ನೊಂದು ಜೀವ ಕಳೆದುಕೊಳ್ಳಲು ನಿರ್ಧರಿಸಿದ ಉಡುಪಿ ಮೂಲದ ಮಹಿಳೆಯೊಬ್ಬರು ಕುಮಾರಧಾರಾ ನದಿಗೆ ಹಾರಿದ ವೇಳೆ ಮೊಸಳೆಯೊಂದು ದಾಳಿ ಮಾಡಿದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರೋಚಕ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಸಾರ್ವಜನಿಕರು ಹಾಗೂ ಪೊಲೀಸರ ತಕ್ಷಣದ ಕಾರ್ಯಾಚರಣೆಯಿಂದಾಗಿ ಮಹಿಳೆಯ ಜೀವ ರಕ್ಷಣೆಯಾಗಿದೆ.
ದಿನಾಂಕ 04.11.2026ರ ರಾತ್ರಿ ವೇಳೆ ಉಡುಪಿ ಮೂಲದ ಮಹಿಳೆಯೊಬ್ಬರು ವೈಯಕ್ತಿಕ ಸಮಸ್ಯೆಯಿಂದ ತೀವ್ರ ಮನನೊಂದು ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆಯ ಬಳಿ ತಲುಪಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಧುಮುಕಿದ್ದಾರೆ. ಈ ಸಂದರ್ಭದಲ್ಲಿ ನದಿಯಲ್ಲಿದ್ದ ಮೊಸಳೆಯೊಂದು ಆಕೆಯ ಮೇಲೆ ದಾಳಿ ನಡೆಸಿ, ಕಾಲಿಗೆ ಕಚ್ಚಿ ಸಣ್ಣ ಪ್ರಮಾಣದ ಗಾಯಗೊಳಿಸಿದೆ.
ಮೊಸಳೆ ಕಚ್ಚಿದ ಆಘಾತ ಮತ್ತು ನೋವಿನಿಂದ ಮಹಿಳೆ ನದಿಯಲ್ಲೇ ಗಟ್ಟಿಯಾಗಿ ಬೊಬ್ಬೆ ಹೊಡೆದಿದ್ದಾರೆ. ಆಕೆಯ ಕಿರುಚಾಟ ಸಮೀಪದಲ್ಲಿದ್ದ ಲಾಡ್ಜ್ ಒಂದರ ಸಿಬ್ಬಂದಿಯ ಕಿವಿಗೆ ಬಿದ್ದಿದೆ. ತಕ್ಷಣ ಸ್ಥಳಕ್ಕೆ ಓಡಿಬಂದ ಕೆಲಸಗಾರರು ಮಹಿಳೆ ಅಪಾಯದಲ್ಲಿರುವುದನ್ನು ಗಮನಿಸಿ, ತಡಮಾಡದೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯ ಸಾರ್ವಜನಿಕರ ಬೆಂಬಲದೊಂದಿಗೆ ನದಿಯಲ್ಲಿದ್ದ ಮಹಿಳೆಯನ್ನು ಜಾಗರೂಕತೆಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಬಳಿಕ ಗಾಯಗೊಂಡಿದ್ದ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯಕೀಯ ನೆರವಿನ ನಂತರ ಆಕೆಯ ಕುಟುಂಬದವರನ್ನು ಸಂಪರ್ಕಿಸಿ, ಸಮಾಧಾನಪಡಿಸಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.