image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೈದರಾಬಾದ್‌ನಲ್ಲಿ ಅಂತರರಾಜ್ಯ ಅಂಡಾಣು ದಾನ ಜಾಲ ಪತ್ತೆ: 43 ಮಹಿಳೆಯರ ರಕ್ಷಣೆ, 8 ಮಂದಿ ಬಂಧನ

ಹೈದರಾಬಾದ್‌ನಲ್ಲಿ ಅಂತರರಾಜ್ಯ ಅಂಡಾಣು ದಾನ ಜಾಲ ಪತ್ತೆ: 43 ಮಹಿಳೆಯರ ರಕ್ಷಣೆ, 8 ಮಂದಿ ಬಂಧನ

ಹೈದರಾಬಾದ್ : ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ವಾಣಿಜ್ಯ ಚಟುವಟಿಕೆಗೆ ಬಳಸಿಕೊಂಡು ನಡೆಸಲಾಗುತ್ತಿದ್ದ ಬೃಹತ್ ಅಂತರರಾಜ್ಯ ಮಟ್ಟದ ಅಂಡಾಣು (ಓಸೈಟ್) ದಾನ ದಂಧೆಯನ್ನು ಹೈದರಾಬಾದ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಮಲ್ಕಾಜ್‌ಗಿರಿ ಕಮಿಷನರೇಟ್‌ನ ವಿಶೇಷ ಕಾರ್ಯಾಚರಣೆ ತಂಡ (SOT), ಬೇಗಂಪೇಟೆ ಹಾಗೂ ಸರೂರನಗರ ಪೊಲೀಸರ ಜಂಟಿ ನೇತೃತ್ವದಲ್ಲಿ ನಗರದ ಐದು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ 43 ಮಹಿಳೆಯರನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಲ್ಲಿ ಮುಖ್ಯ ರೂವಾರಿ ಅಮಿತ್ ಶರ್ಮಾ, ಮಹಿಳೆಯರನ್ನು ಸೇರ್ಪಡೆಗೊಳಿಸುತ್ತಿದ್ದ ನಿಕತ್ ಪ್ರವೀಣ್, ಏಜೆಂಟ್ ರೇಷ್ಮಾ ಖಾತೂನ್, ಎಆರ್‌ಟಿ (ART) ಬ್ಯಾಂಕ್ ವ್ಯವಸ್ಥಾಪಕ ಜಿಪ್ರೇ ಪ್ರದೀಪ್ ಸೇರಿದಂತೆ ಇತರ ಮಧ್ಯವರ್ತಿಗಳು ಸೇರಿದ್ದಾರೆ. ಈ ಅಕ್ರಮ ಜಾಲವು ಫಲವತ್ತತೆ ಚಿಕಿತ್ಸೆ, ಐವಿಎಫ್ (IVF) ಕೇಂದ್ರಗಳು ಹಾಗೂ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಬ್ಯಾಂಕ್‌ಗಳ ಕಾರ್ಯವೈಖರಿ ಮತ್ತು ನಿಯಮಾವಳಿಗಳ ಉಲ್ಲಂಘನೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ, ಪ್ರತಿ ಬಾರಿ ಅಂಡಾಣು ದಾನಕ್ಕೆ 20,000 ದಿಂದ 30,000 ರೂಪಾಯಿಗಳ ಹಣದ ಆಮಿಷವೊಡ್ಡಲಾಗುತ್ತಿತ್ತು. ಆರೋಪಿಗಳು ವಿವಿಧ ರಾಜ್ಯಗಳಲ್ಲಿ ಏಜೆಂಟರನ್ನು ನೇಮಿಸಿ, ಮಹಿಳೆಯರಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಹೈದರಾಬಾದ್‌ಗೆ ಕರೆತರುತ್ತಿದ್ದರು. ನಗರದ ಬೇಗಂಪೇಟೆಯ ಪ್ರಕಾಶ್ ನಗರದಲ್ಲಿ ಮಾಸಿಕ 50,000 ರೂ. ಬಾಡಿಗೆ ಮನೆಯಲ್ಲಿ ಹಾಗೂ ಸರೂರನಗರದ ವಿವಿಧೆಡೆ ವಾಸ್ತವ್ಯ ಕಲ್ಪಿಸಿ, ಫಲವತ್ತತೆ ಚಿಕಿತ್ಸಾ ಕೇಂದ್ರಗಳೊಂದಿಗೆ ಅಕ್ರಮ ಸಂಪರ್ಕ ಕಲ್ಪಿಸಲಾಗುತ್ತಿತ್ತು.

ರಕ್ಷಿಸಲ್ಪಟ್ಟ ಕೆಲವು ಮಹಿಳೆಯರು ನೀಡಿದ ಮಾಹಿತಿಯಂತೆ, ಪ್ರಕ್ರಿಯೆಗೆ ಸಿದ್ಧಪಡಿಸುವ ನೆಪದಲ್ಲಿ ವೈದ್ಯಕೀಯ ನಿಯಮಗಳನ್ನು ಗಾಳಿಗೆ ತೂರಿ ಹಾರ್ಮೋನ್ ಇಂಜೆಕ್ಷನ್‌ಗಳು ಮತ್ತು ಮಾತ್ರೆಗಳನ್ನು ನೀಡಲಾಗಿತ್ತು. ದಾಳಿಯ ವೇಳೆ ಪೊಲೀಸರು ಹ್ಯೂಮಾಗ್ ಎಚ್‌ಪಿ (Humog HP) ಇಂಜೆಕ್ಷನ್‌ಗಳು, ಪ್ರಿಮೊಲುಟ್, ಮೆಪ್ರೇಟ್ ಮಾತ್ರೆಗಳು ಹಾಗೂ ನಕಲಿ ಆಧಾರ್ ಕಾರ್ಡ್‌ಗಳು, ಅಫಿಡವಿಟ್‌ಗಳು ಮತ್ತು ಸಂಶಯಾಸ್ಪದ ವೈದ್ಯಕೀಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸೂಕ್ತ ವೈದ್ಯಕೀಯ ತಪಾಸಣೆ, ಮೇಲ್ವಿಚಾರಣೆ ಹಾಗೂ ಸುರಕ್ಷತಾ ಕ್ರಮಗಳಿಲ್ಲದೆ ಪ್ರಾಣಾಪಾಯ ಉಂಟುಮಾಡುವ ರೀತಿಯಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿತ್ತೇ ಎಂಬುದರ ಕುರಿತು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಬಿ. ಸುಧಿ ಅವರ ಮಾರ್ಗದರ್ಶನದಲ್ಲಿ ಆಳವಾದ ತನಿಖೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬೇಗಂಪೇಟೆ ಮತ್ತು ಸರೂರನಗರ ಪೊಲೀಸ್ ಠಾಣೆಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ, 2021ರ (ART Act) ಅಡಿಯಲ್ಲಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.

Category
ಕರಾವಳಿ ತರಂಗಿಣಿ