ವೇಣೂರು: ಕೆಲಸ ಮಾಡುತ್ತಿದ್ದ ಸಾರ್ವಜನಿಕ ಸ್ಥಳದಲ್ಲೇ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡು, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವೇಣೂರು ನಿವಾಸಿ ಸೈಯ್ಯದ್ ಮಹಮ್ಮದ್ ಇಸಾಕ್ (61) ಬಂಧಿತ ಆರೋಪಿಯಾಗಿದ್ದಾನೆ.
ಸಂತ್ರಸ್ಥ ಯುವತಿಯು ದಿನಾಂಕ 24.10.2026 ರಂದು ಮಧ್ಯಾಹ್ನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಸದ ಸ್ಥಳದಲ್ಲಿದ್ದಾಗ, ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಸೈಯ್ಯದ್ ಮಹಮ್ಮದ್ ಇಸಾಕ್, ಸಾರ್ವಜನಿಕವಾಗಿ ಯುವತಿಯೊಂದಿಗೆ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ, ಹಣದ ಆಮಿಷವೊಡ್ಡಿ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸಂತ್ರಸ್ಥೆಯು ನೀಡಿದ ದೂರಿನನ್ವಯ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 75(1)(ii), 75(1)(iv), 79 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015 ರ (SC & ST Act) ಕಲಂ 3(1)(r), 3(1)(w)(ii) ಮತ್ತು 3(2)(va) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ವೇಣೂರು ಪೊಲೀಸರು ಆರೋಪಿ ಸೈಯ್ಯದ್ ಮಹಮ್ಮದ್ ಇಸಾಕ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.