ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವ್ಯಕ್ತಿಯೊಬ್ಬರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಘಟನೆಯು ದಿನಾಂಕ 21-09-2024 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ನಡೆದಿತ್ತು. ಬಾಗಲಕೋಟೆ ಮೂಲದ 39 ವರ್ಷದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣದ ಪಿರ್ಯಾದುದಾರರಾದ ಹನುಮಂತ ದುರ್ಗಪ್ಪ ವಡ್ಡರ್ ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 99/2024 ರನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಕೊಲೆಗೆ ಕಾರಣ ಮತ್ತು ಆರೋಪಿ ಬಂಧನ:
ಆರೋಪಿ ಧರ್ಮರಾಜ್ ಸುವರ್ಣ (50, ತಂದೆ: ಭಾಸ್ಕರ್ ಮೆಂಡನ್, ವಾಸ: ತೋಟಾ ಬೆಂಗ್ರೆ, ಮಂಗಳೂರು ತಾಲೂಕು) ಹಾಗೂ ಮೃತ ಮುತ್ತು ಬಸವರಾಜ ವಡ್ಡರ್ ಪರಸ್ಪರ ಪರಿಚಯಸ್ಥರಾಗಿದ್ದರು. ಇತ್ತೀಚೆಗೆ ಆರೋಪಿ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲ್ ಅನ್ನು ಮೃತ ಮುತ್ತು ಬಸವರಾಜ ತೆಗೆದುಕೊಂಡು ವಾಪಸ್ ನೀಡದೆ ಹಾಳುಮಾಡಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಂಟಾಗಿದ್ದು, ಆಕ್ರೋಶಗೊಂಡ ಆರೋಪಿ ಧರ್ಮರಾಜ್ ಸುವರ್ಣ ಮರದ ಸೋಂಟೆಯಿಂದ ಹೊಡೆದು ಮುತ್ತು ಬಸವರಾಜನನ್ನು ಕೊಲೆ ಮಾಡಿದ್ದನು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿ ಧರ್ಮರಾಜ್ ಸುವರ್ಣನನ್ನು ದಿನಾಂಕ 26-09-2024 ರಂದು ಬೆಳಗಿನ ಜಾವ 03.00 ಗಂಟೆಗೆ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯದ ತೀರ್ಪು:
ಈ ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕರಾದ ಶ್ರೀ ಮೊಹಮ್ಮದ್ ಸಲೀಂ ಅಬ್ಬಾಸ್ ರವರು ಭಾಗಶಃ ನಡೆಸಿ, ನಂತರ ತನಿಖೆಯಲ್ಲಿ ಎಸ್‌ಸಿ-ಎಸ್‌ಟಿ ಕಾಯ್ದೆಯ ಕಲಂಗಳು ಸೇರ್ಪಡೆಗೊಂಡ ಕಾರಣ ಮುಂದಿನ ತನಿಖೆಯನ್ನು ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶ್ರೀಕಾಂತ.ಕೆ ರವರು ಪೂರೈಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (ಸ್ಪೆಶಲ್ ಕೇಸ್ ನಂಬರ್: 207/2024) ವಿಚಾರಣೆ ಪೂರ್ಣಗೊಂಡು, ಮಾನ್ಯ ನ್ಯಾಯಾಧೀಶರಾದ ಶ್ರೀ ಜಗದೀಶ್ ರವರು ದಿನಾಂಕ 12-10-2026 ರಂದು ತೀರ್ಪು ನೀಡಿದ್ದಾರೆ. ಆರೋಪಿ ಧರ್ಮರಾಜ್ ಸುವರ್ಣನಿಗೆ ಕಲಂ 103(1) ಬಿಎನ್‌ಎಸ್ ಕಾಯ್ದೆಯಡಿ ಜೀವಾವಧಿ ಶಿಕ್ಷೆ ಹಾಗೂ 15,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.