ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಹುಲಿವೇಷ ತರಬೇತಿಗಾಗಿ ಮಂಗಳೂರಿಗೆ ಆಗಮಿಸಿದ್ದ 14 ವರ್ಷದ ಬಾಲಕನೊಬ್ಬ ಪಣಂಬೂರು ಸಮುದ್ರ ಕಿನಾರೆಯಲ್ಲಿ ಆಟವಾಡುವಾಗ ಅಲೆಗಳ ರಭಸಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಕಾಣೆಯಾಗಿರುವ ದಾರುಣ ಘಟನೆ ವರದಿಯಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ರೆಂಕೆದ ಗುತ್ತು, ಕಸಬಾ ಗ್ರಾಮದ ನಿವಾಸಿ ಶ್ರೇಯಸ್ ಎಸ್. ಕುಂಬಾರ (14) ನಾಪತ್ತೆಯಾದ ಬಾಲಕ. ಅಕ್ಟೋಬರ್ 04ರಂದು ಶ್ರೇಯಸ್ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ದಸರಾ ಹಬ್ಬದ ನಿಮಿತ್ತ ಹುಲಿವೇಷ ಹಾಕುವ ತರಬೇತಿ ಪಡೆಯಲು ಮಂಗಳೂರಿಗೆ ಬಂದಿದ್ದನು. ತರಬೇತಿ ಮುಗಿದ ಬಳಿಕ ಶ್ರೇಯಸ್ ಹಾಗೂ ಆತನ ಸ್ನೇಹಿತರು ನಗರದ ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಂಜೆ ಸುಮಾರು 4:30ರಿಂದ 5:00 ಗಂಟೆಯ ಸುಮಾರಿಗೆ ಇವರು ಅಲ್ಲಿನ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿ ಆಟವಾಡುತ್ತಿದ್ದರು.
ಈ ವೇಳೆ ಸಂಜೆ ಸುಮಾರು 6:00 ಗಂಟೆಯ ಸುಮಾರಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ಶ್ರೇಯಸ್ ನೀರಿನಲ್ಲಿ ಮುಳುಗಿದ್ದು, ಸಮುದ್ರದ ಬಲವಾದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾನೆ. ಜೊತೆಗಿದ್ದ ಅಪ್ರಾಪ್ತ ಸ್ನೇಹಿತರು ಈ ಘಟನೆಯಿಂದ ತೀವ್ರ ಭಯಭೀತರಾಗಿ, ಅಂದು ರಾತ್ರಿ ವಿಷಯವನ್ನು ಯಾರಿಗೂ ತಿಳಿಸದೆ ಮರೆಮಾಚಿದ್ದಾರೆ. ನಂತರ ಮರುದಿನ ಅಂದರೆ ಅಕ್ಟೋಬರ್ 05ರಂದು ಬೆಳಿಗ್ಗೆ ಬಾಲಕನ ಸ್ನೇಹಿತರು ಶ್ರೇಯಸ್ ಮನೆಯವರಿಗೆ ಈ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಆಘಾತಕ್ಕೊಳಗಾದ ಕಾಣೆಯಾದ ಬಾಲಕನ ತಂದೆ ಶೇಷಪ್ಪ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 127/2026ರಡಿ ಮನುಷ್ಯ ಕಾಣೆ (Missing) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಬಾಲಕನ ಪತ್ತೆಗಾಗಿ ಭಾರತೀಯ ಕರಾವಳಿ ರಕ್ಷಕ ಪಡೆ (Coast Guard), ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ತೀರದ ವ್ಯಾಪ್ತಿ ಹೊಂದಿರುವ ಎಲ್ಲಾ ಪೊಲೀಸ್ ಠಾಣೆಗಳಿಗೆ ತುರ್ತು ಮಾಹಿತಿ ನೀಡಲಾಗಿದೆ. ಜೊತೆಗೆ ಸ್ಥಳೀಯ ಲೈಫ್ ಗಾರ್ಡ್‌ಗಳು, ನುರಿತ ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಸಮುದ್ರದಲ್ಲಿ ನಾಪತ್ತೆಯಾದ ಬಾಲಕನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.