image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅರಬ್ಬಿ ಸಮುದ್ರದಲ್ಲಿ ₹3,000 ಕೋಟಿ ಮೌಲ್ಯದ ಮಾದಕದ್ರವ್ಯ ವಶ: ಐವರು ಪಾಕಿಸ್ತಾನಿಗಳ ಬಂಧನ

ಅರಬ್ಬಿ ಸಮುದ್ರದಲ್ಲಿ ₹3,000 ಕೋಟಿ ಮೌಲ್ಯದ ಮಾದಕದ್ರವ್ಯ ವಶ: ಐವರು ಪಾಕಿಸ್ತಾನಿಗಳ ಬಂಧನ

ಮುಂಬೈ : ಅರಬ್ಬಿ ಸಮುದ್ರದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ (ICG) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ, ಇರಾನ್ ಮೂಲದ ಜಲ ನೌಕೆಯಿಂದ 3,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 526 ಕೆಜಿ ಮೆಥಾಂಫೆಟಮೈನ್ ಹಾಗೂ ಹೆರಾಯಿನ್ ಮಾದಕವಸ್ತುಗಳನ್ನು ವಶಪಡಿಸಿಕೊಂಡಿವೆ. ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಬಳಿ ನಡೆದ ಈ ಕಾರ್ಯಾಚರಣೆಯಲ್ಲಿ ನೌಕೆಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.

ಲಭ್ಯವಾದ ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕರಾವಳಿ ಕಾವಲು ಪಡೆ ಸಮುದ್ರ ಮತ್ತು ವಾಯು ಮಾರ್ಗದ ಮೂಲಕ ಕಣ್ಗಾವಲು ನಡೆಸಿತ್ತು. ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ಚಲಿಸುತ್ತಿದ್ದ ಅನುಮಾನಾಸ್ಪದ ನೌಕೆಯನ್ನು ಬೆನ್ನಟ್ಟಿ ತಡೆದು ಪರಿಶೀಲಿಸಿದಾಗ ಉನ್ನತ ದರ್ಜೆಯ ನಿಷೇಧಿತ ಮಾದಕದ್ರವ್ಯ ಕಳ್ಳಸಾಗಣೆ ಬೆಳಕಿಗೆ ಬಂದಿದೆ.

ವಶಪಡಿಸಿಕೊಂಡ ಸರಕು, ನೌಕೆ ಹಾಗೂ ಸಿಬ್ಬಂದಿಯನ್ನು ಜಂಟಿ ವಿಚಾರಣೆ ಮತ್ತು ಮುಂದಿನ ಕಾನೂನು ಕ್ರಮಗಳಿಗಾಗಿ ಬಿಗಿ ಭದ್ರತೆಯೊಂದಿಗೆ ಮುಂಬೈಗೆ ತರಲಾಗಿದೆ. ಸಮುದ್ರ ಮಾರ್ಗದ ಮೂಲಕ ನಡೆಯುವ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ತಡೆಯಲು ಭದ್ರತಾ ಸಂಸ್ಥೆಗಳು ಕಣ್ಗಾವಲು ಬಿಗಿಗೊಳಿಸಿದ್ದು, ಅಂತರರಾಷ್ಟ್ರೀಯ ಜಾಲದ ಆರ್ಥಿಕ ಮೂಲಗಳನ್ನು ದುರ್ಬಲಗೊಳಿಸಲು ಮತ್ತು ಸಂಶ್ಲೇಷಿತ ಮಾದಕವಸ್ತುಗಳು ದೇಶದ ಮುಖ್ಯ ಭೂಭಾಗ ತಲುಪದಂತೆ ತಡೆಯಲು ಈ ಕಾರ್ಯಾಚರಣೆ ನೆರವಾಗಲಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

Category
ಕರಾವಳಿ ತರಂಗಿಣಿ