image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಕಲಿ ಔಷಧ ಜಾಲದ ಮಾಸ್ಟರ್‌ಮೈಂಡ್ ಪ್ರಶಾಂತ್ ಬಂಧನ: ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಬಲೆಗೆ

ನಕಲಿ ಔಷಧ ಜಾಲದ ಮಾಸ್ಟರ್‌ಮೈಂಡ್ ಪ್ರಶಾಂತ್ ಬಂಧನ: ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಬಲೆಗೆ

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಹುಕೋಟಿ ನಕಲಿ ಔಷಧ ತಯಾರಿಕೆ ಹಾಗೂ ಅಕ್ರಮ ಮಾರಾಟ ಜಾಲದ ಪ್ರಮುಖ ಸೂತ್ರಧಾರ ಪ್ರಶಾಂತ್‌ನನ್ನು ವಿಶೇಷ ತನಿಖಾ ತಂಡ (ಎಸ್‌‍ಐಟಿ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆರೋಪಿ ಪ್ರಶಾಂತ್ ವಿದೇಶಕ್ಕೆ ಪರಾರಿಯಾಗಿದ್ದ. ಈತನ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು. ಮೂಲಗಳ ಪ್ರಕಾರ, ಆತ ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿಂದ ಆತನ ನಗರಕ್ಕೆ ಹಿಂತಿರುಗುತ್ತಿದ್ದಾನೆಂಬ ಸುಳಿವಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಜೀವ ರಕ್ಷಕ ಔಷಧಗಳ ಹೆಸರಿನಲ್ಲಿ ಕಳಪೆ ಹಾಗೂ ನಕಲಿ ಮಾತ್ರೆಗಳನ್ನು ಪೂರೈಸಲಾಗುತ್ತಿದ್ದ ದೊಡ್ಡ ಜಾಲವನ್ನು ಸಾರ್ವಜನಿಕರು ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪತ್ತೆಹಚ್ಚಲಾಗಿತ್ತು. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದ್ದ ಈ ಅಕ್ರಮ ಜಾಲದ ತನಿಖೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರತರಲು ಎಸ್‌ಐಟಿಗೆ ವಹಿಸಿತ್ತು.

ಬಳಿಕ ತನಿಖೆಯನ್ನು ಚುರುಕುಗೊಳಿಸಿದ್ದ ಎಸ್‌ಐಟಿ, ಇತ್ತೀಚೆಗಷ್ಟೇ ಈ ಜಾಲದ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್‌ನನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ವೀರೇಶ್ ಜೈನ್ ನೀಡಿದ ಹೇಳಿಕೆ ಹಾಗೂ ಸ್ಫೋಟಕ ಮಾಹಿತಿಗಳ ಆಧಾರದ ಮೇಲೆಯೇ ಈ ನಕಲಿ ಔಷಧ ಜಾಲದ ಮಾಸ್ಟರ್‌ಮೈಂಡ್ ಪ್ರಶಾಂತ್ ಎಂಬುದು ದೃಢಪಟ್ಟಿತ್ತು.

ನಗರದ ಹೊರವಲಯದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಆ.18ರಂದು ನಡೆದ ದಾಳಿ ಈ ಪ್ರಕರಣದ ತನಿಖೆಗೆ ಪ್ರಮುಖ ತಿರುವು ನೀಡಿತ್ತು. ತಾವರೆಕೆರೆ ಠಾಣೆ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಸುಮಾರು ₹5 ಕೋಟಿ ಮೌಲ್ಯದ ನಕಲಿ ಮತ್ತು ಅವಧಿ ಮೀರಿದ ಔಷಧಗಳ ಸಂಗ್ರಹ ಪತ್ತೆಯಾಗಿತ್ತು. ಪ್ರಸ್ತುತ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿರುವ ಎಸ್‌ಐಟಿ, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಕ್ರಮ ಕೈಗೊಂಡಿದೆ.

Category
ಕರಾವಳಿ ತರಂಗಿಣಿ