image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಕ್ರಮ ಜಾನುವಾರು ಸಾಗಾಟ ಯತ್ನ ವಿಫಲ – 17 ಜಾನುವಾರುಗಳ ರಕ್ಷಣೆ

ಅಕ್ರಮ ಜಾನುವಾರು ಸಾಗಾಟ ಯತ್ನ ವಿಫಲ – 17 ಜಾನುವಾರುಗಳ ರಕ್ಷಣೆ

ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಾಗೂ ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, 17 ಮೂಕಪ್ರಾಣಿಗಳನ್ನು ರಕ್ಷಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸರ ಬೆಳಗಿನ ಜಾವದ ಗಸ್ತು ಕರ್ತವ್ಯದ ವೇಳೆ ಈ ಕಾರ್ಯಾಚರಣೆ ನಡೆದಿದೆ. ಸೆಪ್ಟೆಂಬರ್ 22, 2026 ರಂದು ಬೆಳಗಿನ ಜಾವ ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿ ಇಲಾಖಾ ವಾಹನದಲ್ಲಿ ಮಾರ್ನಿಂಗ್ ರೌಂಡ್ಸ್ನಲ್ಲಿದ್ದಾಗ, ಐಚರ್ (EICHER) ಲಾರಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಪಡೀಲ್ ಟೊಯೋಟಾ ಕಾರ್ ಶೋರೂಮ್ ಎದುರು ವಾಹನಕ್ಕಾಗಿ ಕಾಯುತ್ತಿದ್ದ ವೇಳೆ, ಆಡ್ಯಾರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ ಕಂದು ಬಣ್ಣದ ಐಚರ್ ಲಾರಿಯನ್ನು ಬೆನ್ನಟ್ಟಿ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ವಾಹನ ತಡೆದ ತಕ್ಷಣ ಲಾರಿಯಲ್ಲಿದ್ದ ಓರ್ವ ವ್ಯಕ್ತಿ ಕೆಳಗೆ ಇಳಿದು ಪರಾರಿಯಾಗಿದ್ದಾನೆ. ಲಾರಿಯಲ್ಲಿದ್ದ ಚಾಲಕನನ್ನು ಹಾಸನ ಜಿಲ್ಲೆಯ ಹುಣಸಿನಕೆರೆ ರೋಡ್ ಸ್ಲಮ್ ಬೋರ್ಡ್ ವಿಶ್ವನಾಥ ನಗರ ಲೇಔಟ್ ನಿವಾಸಿ 23 ವರ್ಷದ ಸಾಧಿಕ್ ಜಿ ಎಂದು ಗುರುತಿಸಿ ವಶಕ್ಕೆ ಪಡೆಯಲಾಗಿದೆ.

ಲಾರಿಯ ಬಾಡಿಯನ್ನು ಹಸಿರು ಬಣ್ಣದ ಟಾರ್ಪಲ್ನಿಂದ ಮುಚ್ಚಲಾಗಿತ್ತು. ಅದನ್ನು ಪರಿಶೀಲಿಸಿದಾಗ ಒಟ್ಟು 17 ಜಾನುವಾರುಗಳು ಪತ್ತೆಯಾಗಿವೆ. ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಜಾನುವಾರುಗಳನ್ನು ಒಂದರ ಮೇಲೊಂದು ಬಿಗಿಯಾಗಿ ಹಗ್ಗಗಳಿಂದ ಕಟ್ಟಿ, ಕತ್ತುಗಳನ್ನು ಮೇಲಕ್ಕೆ ಎತ್ತಿ ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಕ್ರೂರವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಿವೆನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಆಕ್ಟ್ (Prevention of Cruelty to Animals Act) ಹಾಗೂ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಮತ್ತು ಬಿ.ಎನ್.ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು 17 ಜಾನುವಾರುಗಳು, ಸಾಗಾಟಕ್ಕೆ ಬಳಸಿದ ಐಚರ್ ಲಾರಿ ಹಾಗೂ ಆರೋಪಿ ಸಾಧಿಕ್ನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸುಬಾನ್ ಮತ್ತು ರೆಹಮಾನ್ ಎಂಬ ಇತರ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Category
ಕರಾವಳಿ ತರಂಗಿಣಿ