ಪುತ್ತೂರು: ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ರಾತ್ರಿ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಜಂಕ್ಷನ್ ಬಳಿ ನಿಯಮ ಮೀರಿ ಧ್ವನಿವರ್ಧಕ ಬಳಸಿದ್ದನ್ನು ಪ್ರಶ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.
ದಿನಾಂಕ 17.09.2026ರಂದು ರಾತ್ರಿ ‘ಪಂಚಮುಖಿ ಪ್ರೆಂಡ್ಸ್’ ಹೆಸರಿನ ಟ್ಯಾಬ್ಲೊದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅತಿಯಾದ ಶಬ್ದದಲ್ಲಿ ಧ್ವನಿವರ್ಧಕ ಬಳಸಲಾಗುತ್ತಿತ್ತು. ಈ ವೇಳೆ ಸ್ಥಳದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆಯೋಜಕರು ಧ್ವನಿವರ್ಧಕ ನಿಲ್ಲಿಸಿದರೂ, ಸ್ಥಳಕ್ಕೆ ಬಂದ ಅಜಿತ್ ರೈ ಹೊಸಮನೆ ಮತ್ತು ಇತರರು ಧ್ವನಿವರ್ಧಕ ಸ್ಥಗಿತಗೊಳಿಸುವುದಕ್ಕೆ ಅಡ್ಡಿಪಡಿಸಿ ಇತರರನ್ನು ಪ್ರಚೋದಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ತಿಳಿಸಿದರೂ ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಳಿಕೆಯನ್ನು ಮುಂದುವರಿಸಿ, ಸರಕಾರಿ ಕರ್ತವ್ಯಕ್ಕೆ ಅಡಚಣೆ ಉಂಟುಮಾಡಿದ್ದಾರೆ. ಈ ಸಂಬಂಧ ಆರೋಪಿತರಾದ ಅಜಿತ್ ರೈ ಹೊಸಮನೆ, ಪಂಚಮುಖಿ ಪ್ರೆಂಡ್ಸ್ ಟ್ಯಾಬ್ಲೋ ಆಯೋಜಕರು ಹಾಗೂ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ ಸಂಖ್ಯೆ: 113/2026, ಕಲಂ: 49, 132, 3(5) ಬಿ.ಎನ್.ಎಸ್ 2023 ಮತ್ತು ಕಲಂ- 103, 109 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.