ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಫೋನ್ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, 10 ಸ್ಮಾರ್ಟ್ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಯ ಭಾಗವಾಗಿ ಜೈಲಿನ ಎ-ಬ್ಲಾಕ್ನಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ವಿವಿಧ ಪ್ರಕರಣಗಳ ವಿಚಾರಣಾಧೀನ ಕೈದಿಗಳಾದ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಹಾಗೂ ಅರ್ಫಜ್ ಎಂಬುವವರು ಅಕ್ರಮವಾಗಿ ಬಚ್ಚಿಟ್ಟುಕೊಂಡಿದ್ದ ಒಟ್ಟು 10 ಮೊಬೈಲ್ ಸ್ಮಾರ್ಟ್ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡಿರುವ ಕೈದಿಗಳ ಪೈಕಿ ಮೊದಲ ನಾಲ್ವರು ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಹಾಗೆಯೇ, ಕ್ರ.ಸಂ 5 ರಿಂದ 8 ರವರೆಗಿನವರು ಎನ್.ಡಿ.ಪಿ.ಎಸ್ ಡ್ರಗ್ ಪೆಡ್ಲಿಂಗ್ ಆರೋಪಿಗಳಾಗಿದ್ದರೆ, 9ನೇ ಕೈದಿಯು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾದ ಕೋಕಾ (COCA) ಪ್ರಕರಣದ ಆರೋಪಿಯಾಗಿದ್ದಾನೆ. ಈ ಮೊಬೈಲ್ ಫೋನ್ಗಳ ಬಳಕೆ ಮತ್ತು ಜೈಲಿಗೆ ಇವುಗಳ ಪೂರೈಕೆ ಹೇಗೆಯಾಯಿತು ಎಂಬ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.