ಕಡಬ: ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಬೆಲೆಯ ವಸ್ತುಗಳನ್ನು ನೀಡುವುದಾಗಿ ಹಾಗೂ ಹಣ ಹೂಡಿಕೆ ಅಥವಾ ಜನರನ್ನು ಸದಸ್ಯರನ್ನಾಗಿ ಸೇರಿಸಿದರೆ ಭಾರಿ ಕಮಿಷನ್ ಸಿಗುತ್ತದೆ ಎಂದು ಆಮಿಷವೊಡ್ಡಿ, ಅಕ್ರಮವಾಗಿ ನಿಷೇಧಿತ ಹಣಪರಿಚಲನೆ ಯೋಜನೆ ನಡೆಸುತ್ತಿದ್ದ ಹಾವೇರಿ ಮೂಲದ 'KINGS Bazaar' ಸಂಸ್ಥೆ ಹಾಗೂ ಸ್ಥಳೀಯ ನಿರ್ವಾಹಕರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಈ ಅಕ್ರಮ ಜಾಲವು ಸಕ್ರಿಯವಾಗಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ, ಕಡಬ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬೆಳ್ತಂಗಡಿ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50) ಮತ್ತು ಗುರುಮೂರ್ತಿ (54), ಕಡಬ ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್ ಎಸ್ (55), ಕಿರಣ ಕುಮಾರ್ (21) ಹಾಗೂ ಶ್ರೀನಾಥ್ (48), ಕಡಬ ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ ಹೆಚ್ (42), ಮತ್ತು ಪುತ್ತೂರು ನಿವಾಸಿ ಸಂದೇಶ್ ಸೇರಿದಂತೆ KINGS Bazaar ಸಂಸ್ಥೆ ಹಾಗೂ ಅದರ ಮಾಲೀಕರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕರಿಗೆ ಶೀಘ್ರವಾಗಿ ಹಣ ಗಳಿಸುವ ಸುಲಭ ಮಾರ್ಗವೆಂದು ನಂಬಿಸಿ, ಅಕ್ರಮ ಚಿಟ್ ಫಂಡ್ ಮತ್ತು ಮನಿ ಸರ್ಕ್ಯುಲೇಷನ್ ಸ್ಕೀಮ್ ಅಡಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಜಾಲವನ್ನು ಇಲ್ಲಿ ನಡೆಸಲಾಗುತ್ತಿತ್ತು.
ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 100/2026, ಕಲಂ 4, 5, 6 PRIZE CHIT & MONEY CIR.SCHEMES (BANNING) ACT, 1978 ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಅಧಿಕೃತವಲ್ಲದ ಇಂತಹ ಆಕರ್ಷಕ ಮೋಸದ ಹಣಕಾಸು ಯೋಜನೆಗಳಿಗೆ ಸಾರ್ವಜನಿಕರು ಯಾರೂ ಬಲಿಯಾಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.