ಉಡುಪಿ: ಮಲ್ಪೆ ಸಮೀಪದ ನೇಜಾರಿನಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಗೆ ಬೆಂಗಳೂರಿನ ಜೈಲಿನಲ್ಲಿ ಜೀವ ಬೆದರಿಕೆ ಬಂದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಆತನಿಗೆ ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆ ವೇಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿ ಪ್ರವೀಣ್ ಚೌಗುಲೆ, ಜೈಲಿನಲ್ಲಿ ತನಗೆ ಪ್ರಾಣಾಪಾಯವಿರುವ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾನೆ. ಕಳೆದ ಆಗಸ್ಟ್ 7ರಂದು ವಿಚಾರಣೆ ಮುಗಿದ ಬಳಿಕ ತನ್ನನ್ನು ಕೊಠಡಿಗೆ ಕರೆದೊಯ್ಯುವಾಗ ಮಂಗಳೂರು ಮೂಲದ ಕೆಲ ಕೈದಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾನೆ. ಆರೋಪಿಯ ಮನವಿಯನ್ನು ಆಲಿಸಿದ ನ್ಯಾಯಾಲಯವು, ಆತನ ಸುರಕ್ಷತೆಯ ದೃಷ್ಟಿಯಿಂದ ಕಾರಾಗೃಹದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜೈಲು ಆಡಳಿತಕ್ಕೆ ಆದೇಶಿಸಿದೆ.