ಮಂಗಳೂರು: ಪೋಕ್ಸೋ ಪ್ರಕರಣವೊಂದರ ವಿಚಾರಣೆ ನಡೆಸಿದ ಮಾನ್ಯ 7 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಐದು ವರ್ಷಗಳ ಸಾಧಾರಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಕಡಬ ತಾಲೂಕಿನ ಕುದ್ಮಾರು ನಿವಾಸಿ ಅಬ್ದುಲ್ಲಾ (64) ದೋಷಿ ಎಂದು ಸಾಬೀತಾದ ವ್ಯಕ್ತಿ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಐಪಿಸಿ ಕಲಂ 354(A1), 506 ಹಾಗೂ ಪೋಕ್ಸೋ ಕಾಯ್ದೆಯಡಿ (POCSO Act - 2012) ಪ್ರಕರಣ ದಾಖಲಾಗಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿ ಅವರು ಆರೋಪಿಗೆ 5 ವರ್ಷಗಳ ಸಾಧಾರಣ ಕಾರಾಗೃಹ ವಾಸ ಮತ್ತು 35,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ರಿ ಪ್ರಕರಣದ ತನಿಖೆಯನ್ನು ಅಂದಿನ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ತನಿಖಾಧಿಕಾರಿ ನವೀನ್ ಚಂದ್ರ ಜೋಗಿ ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಪುಷ್ಪರಾಜ್ ಅವರು ಸಮರ್ಥವಾಗಿ ವಾದಮಂಡನೆ ನಡೆಸಿದ್ದರು.