ಬಂಟ್ವಾಳ: ವೃದ್ಧಾಪ್ಯದಲ್ಲಿದ್ದ ಸ್ವಂತ ಅಜ್ಜಿಯ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಳೆಗಳನ್ನು ಬಲವಂತವಾಗಿ ದೋಚಿ ಪರಾರಿಯಾಗಿದ್ದ ಆಪಾದಿತ ಮೊಮ್ಮಗನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆಪಾದಿತನನ್ನು ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ (33) ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು 5,00,000 ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿನಾಂಕ 14.08.2026 ರಂದು ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ 82 ವರ್ಷದ ಅವ್ವಮ್ಮ ಎಂಬ ವೃದ್ಧೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ. ಈ ವೇಳೆ ವೃದ್ಧೆಯ ಕೈಗೆ ರಕ್ತಗಾಯವಾಗಿತ್ತು. ಈ ಕುರಿತು ವೃದ್ಧೆಯ ಮಗ ಸಾದಿಕ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ: 70/2026, ಕಲಂ: 309(6) BNS- 2023) ದಾಖಲಾಗಿತ್ತು.
ಪ್ರಕರಣದ ಸುಳಿವು ಬೆನ್ನತ್ತಿದ ಪೊಲೀಸರು ದಿನಾಂಕ 16.08.2026 ರಂದು ಕಾರ್ಯಾಚರಣೆ ನಡೆಸಿ, ಸಂತ್ರಸ್ತೆ ಅವ್ವಮ್ಮ ಅವರ ಮೊಮ್ಮಗ ಶಬೀರ್‌ನನ್ನು ಬಂಧಿಸಿದ್ದಾರೆ. ಆತನಿಂದ ಕಳವು ಮಾಡಿದ್ದ ಎರಡೂ ಬಳೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಆಪಾದಿತನನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಈ ಯಶಸ್ವಿ ಪತ್ತೆ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ರೋಹಿಸಣಿ ಸಿ.ಕೆ. ಅವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣಾ ಪಿಎಸ್ಐ ರಾಜೇಶ್ ಕೆ.ವಿ., ಸಿಬ್ಬಂದಿಗಳಾದ ಬೆನ್ನಿಚ್ಚನ್, ಪ್ರವೀಣ್ ಮೂರುಗೋಳಿ, ರಾಜೇಶ್, ವಿಜಯ್ ಕುಮಾರ್, ರಾಹುಲ್ ರಾವ್, ನಾಗರಾಜ್, ರಜಿತ್, ಬಸವರಾಜ್, ಸತೀಶ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಭಾಗವಹಿಸಿದ್ದರು.