ಶಿವಮೊಗ್ಗ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 16ರಂದು 'ಶಿವಮೊಗ್ಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಸೀಸನ್-3' ಜರುಗಲಿದೆ ಎಂದು ಲೀಗ್ ಅಧ್ಯಕ್ಷ ಕುಮರೇಶ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬ್ಯಾಡ್ಮಿಂಟನ್ ಕ್ರೀಡೆಯು ದೇಹದ ಸದೃಢತೆ ಹಾಗೂ ಆರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗುತ್ತದೆ. ಯುವ ಸಮುದಾಯವನ್ನು ಕ್ರೀಡೆಯತ್ತ ಸೆಳೆಯುವ ಸದುದ್ದೇಶದಿಂದ ಈ ಕೂಟವನ್ನು ಆಯೋಜಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಆಗಸ್ಟ್ 16ರ ಬೆಳಿಗ್ಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಲೀಗ್‌ಗೆ ಚಾಲನೆ ದೊರೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಾಪ್‌ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಪಂದ್ಯಾವಳಿ ಉದ್ಘಾಟಿಸಲಿದ್ದು, ವೀರಾಂಜನೇಯ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕರಾದ ಕುಮರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿ ಎಂ.ಡಿ. ಪಾಂಡುರಂಗ ಭಾಗವಹಿಸಲಿದ್ದು, ಅತಿಥಿಗಳಾಗಿ ಪರಮೇಶ್ವರ, ರೇಖ್ಯಾನಾಯ್ಕ, ಸುಧಾಕರ್ ಬಿಜ್ಜೂರ್, ಉಮೇಶ್ ಎಂ., ಹರೀಶ್, ಸತೀಶ್ ಹಾಗೂ ಡಾ. ನವೀನ್ ನಾಗರಾಜ್ ಪಾಲ್ಗೊಳ್ಳಲಿದ್ದಾರೆ. ನಗರದ ಕ್ರೀಡಾಸಕ್ತರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.