ಕೊರಿಯಾ : ಆಸಾನ್‌ನಲ್ಲಿ ನಡೆದ BWF ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಶ್ಮಿತಾ ಚಾಲಿಹಾ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಚೀನಾದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಹಾನ್ ಕಿಯಾನ್ ಕ್ಸಿ ವಿರುದ್ಧ ರೋಚಕ ಗೆಲುವು ಸಾಧಿಸಿದ ಗುವಾಹಟಿಯ 26 ವರ್ಷದ ಅಶ್ಮಿತಾ, ತಮ್ಮ ಚೊಚ್ಚಲ BWF ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ನಂತರ ಭರ್ಜರಿ ಪ್ರತಿಹೋರಾಟ ನಡೆಸಿ 53 ನಿಮಿಷಗಳಲ್ಲಿ 14-21, 21-14, 21-14 ಅಂತರದಿಂದ ತಮ್ಮ ಎದುರಾಳಿಯನ್ನು ಮಣಿಸಿದರು.
ಮೇ ತಿಂಗಳಿನಲ್ಲಿ ಮೂರು ತಿಂಗಳ ಗಾಯದ ವಿಶ್ರಾಂತಿಯಿಂದ ಹೊರಬಂದ ನಂತರ ಅಶ್ಮಿತಾ BWF ಟೂರ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ರಾಂತಿಯ ನಂತರದ ತಮ್ಮ ಮೊದಲ ಎರಡು ಪಂದ್ಯಾವಳಿಗಳಾದ ಚೀನಾ ಮಾಸ್ಟರ್ಸ್ ಮತ್ತು ಮಲೇಷ್ಯಾ ಮಾಸ್ಟರ್ಸ್‌ನಲ್ಲೂ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಪ್ರಶಸ್ತಿ ಗೆಲುವಿನೊಂದಿಗೆ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಮತ್ತು ದೇವಿಕಾ ಸಿಹಾಗ್ ಬಳಿಕ BWF ಟೂರ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತೀಯ ಕ್ರೀಡಾಪಟುಗಳ ಪಟ್ಟಿಗೆ ಈಗ ಅಶ್ಮಿತಾ ಮತ್ತು ತನ್ವಿ ಸೇರ್ಪಡೆಗೊಂಡಿದ್ದಾರೆ.