image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೇಂಟ್ ಲೂಯಿಸ್ ರ‍್ಯಾಪಿಡ್ ಚೆಸ್: ಅಗ್ರಸ್ಥಾನಕ್ಕೇರಿದ ಆರ್‌. ಪ್ರಜ್ಞಾನಂದ

ಸೇಂಟ್ ಲೂಯಿಸ್ ರ‍್ಯಾಪಿಡ್ ಚೆಸ್: ಅಗ್ರಸ್ಥಾನಕ್ಕೇರಿದ ಆರ್‌. ಪ್ರಜ್ಞಾನಂದ

ಸೇಂಟ್ ಲೂಯಿಸ್: ಭಾರತದ ಗ್ರಾಂಡ್‌ಮಾಸ್ಟರ್ ಆರ್‌. ಪ್ರಜ್ಞಾನಂದ ಅವರು ಸೇಂಟ್ ಲೂಯಿಸ್ ರ‍್ಯಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ರ‍್ಯಾಪಿಡ್ ಸುತ್ತುಗಳ ಬಳಿಕ ಅಗ್ರಸ್ಥಾನಕ್ಕೇರಿದ್ದಾರೆ. ಸ್ಪಷ್ಟವಾದ ತಂತ್ರಗಾರಿಕೆ ಹಾಗೂ ಕರಾರುವಾಕ್ ನಡೆಗಳ ಮೂಲಕ ಮಿಂಚಿದ ಅವರು ಸಂಭವನೀಯ 18 ಪಾಯಿಂಟ್‌ಗಳಲ್ಲಿ 12 ಪಾಯಿಂಟ್ಸ್ ಗಳಿಸಿದ್ದಾರೆ.

9 ಸುತ್ತುಗಳ ರ‍್ಯಾಪಿಡ್ ವಿಭಾಗದಲ್ಲಿ (ಗೆಲುವಿಗೆ ತಲಾ ಎರಡು ಪಾಯಿಂಟ್ಸ್) ಪ್ರಜ್ಞಾನಂದ ನಾಲ್ಕು ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡು, ಒಂದು ಪಂದ್ಯದಲ್ಲಿ ಸೋಲನುಭವಿಸಿದರು. 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಡಚ್ ಗ್ರಾಂಡ್‌ಮಾಸ್ಟರ್ ಜೋರ್ಡನ್ ವಾನ್ ಫೋರೆಸ್ಟ್ ಅವರಿಗೆ ಸೋತರಾದರೂ, ಒಂದು ಪಾಯಿಂಟ್ ಅಂತರದಿಂದ ಮುನ್ನಡೆ ಉಳಿಸಿಕೊಳ್ಳುವಲ್ಲಿ ಸಫಲರಾದರು. ರ‍್ಯಾಪಿಡ್ ವಿಭಾಗದ ಕೊನೆಯ ಸುತ್ತನ್ನು ಗೆದ್ದಿದ್ದಲ್ಲಿ ಅವರು ಬ್ಲಿಟ್ಜ್ ಟೂರ್ನಿಯಲ್ಲಿ ಮತ್ತಷ್ಟು ಉತ್ತಮ ಮುನ್ನಡೆಯೊಡನೆ ಕಣಕ್ಕಿಳಿಯುವ ಅವಕಾಶವಿರುತ್ತಿತ್ತು.

ವಿಶ್ವ ಚಾಂಪಿಯನ್‍ಷಿಪ್ ಪಟ್ಟಕ್ಕೆ ಗುಕೇಶ್ ಅವರಿಗೆ ಚಾಲೆಂಜರ್ ಆಗಿರುವ ಉಜ್ಬೆಕಿಸ್ತಾನದ ಜಾವೋಖಿರ್ ಸಿಂಧರೋವ್ (11 ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿದ್ದರೆ, ಅಮೆರಿಕದ ವೆಸ್ಲಿ ಸೊ (10 ಪಾಯಿಂಟ್ಸ್) ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟು ಹತ್ತು ಆಟಗಾರರು ಕಣದಲ್ಲಿದ್ದು, ಡಚ್ ಆಟಗಾರ ಅನಿಶ್ ಗಿರಿ ಮತ್ತು ಕ್ಯೂಬಾ ಮೂಲದ ಅಮೆರಿಕದ ಆಟಗಾರ ಲೀನಿಯರ್ ಡೊಮಿಂಗ್ಯೂಜ್ ಪೆರೆಝ್ (ತಲಾ 9 ಪಾಯಿಂಟ್ಸ್) ನಂತರದ ಸ್ಥಾನಗಳಲ್ಲಿದ್ದಾರೆ. ಸುಮಾರು ₹1.90 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಇನ್ನೂ ಬ್ಲಿಟ್ಜ್ ವಿಭಾಗದ 18 ಸುತ್ತುಗಳು ಬಾಕಿಯಿದ್ದು, ವಿಜೇತ ಆಟಗಾರ ₹47.50 ಲಕ್ಷ ರೂಪಾಯಿಯನ್ನು ಜೇಬಿಗಿಳಿಸಲಿದ್ದಾರೆ.

Category
ಕರಾವಳಿ ತರಂಗಿಣಿ