image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಮನ್‌ವೆಲ್ತ್ ಗೇಮ್ಸ್ : ಭಾರತಕ್ಕೆ ಬೆಳ್ಳಿ, ಕಂಚಿನ ಪದಕ; ಫೈನಲ್‌ಗೆ ನೀರಜ್ ಪಡೆ

ಕಾಮನ್‌ವೆಲ್ತ್ ಗೇಮ್ಸ್ : ಭಾರತಕ್ಕೆ ಬೆಳ್ಳಿ, ಕಂಚಿನ ಪದಕ; ಫೈನಲ್‌ಗೆ ನೀರಜ್ ಪಡೆ

ಗ್ಲಾಸ್ಗೋ : ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಪುರುಷರ +110 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ ಅಲ್ಪ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್‌ನಲ್ಲಿ ಒಟ್ಟು 388 ಕೆಜಿ ಭಾರ ಎತ್ತುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಸ್ನ್ಯಾಚ್‌ನಲ್ಲಿ 176 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ 212 ಕೆಜಿ ಎತ್ತಿ ಎರಡು ನೂತನ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದರು. ಚಿನ್ನ ಗೆದ್ದ ನ್ಯೂಜಿಲ್ಯಾಂಡ್‌ನ ಡೇವಿಡ್ ಲಿಟಿ ಅವರಿಗಿಂತ ಕೇವಲ 1 ಕೆಜಿ ಹಿನ್ನಡೆಯಿಂದ ಲವ್‌ಪ್ರೀತ್ ಬೆಳ್ಳಿ ಪದಕಕ್ಕೆ ಭಾಜನರಾದರು. ಮತ್ತೊಂದೆಡೆ, ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಕಲಿರಾಮಣ ತಮ್ಮ ಮೂರನೇ ಪ್ರಯತ್ನದಲ್ಲಿ 58.65 ಮೀಟರ್ ದೂರ ಎಸೆಯುವ ಮೂಲಕ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಈ ಸ್ಪರ್ಧೆಯಲ್ಲಿ ಜಮೈಕಾದ ಸಮಂತಾ ಹಾಲ್ (61.66 ಮೀ) ಚಿನ್ನ ಹಾಗೂ ಕೆನಡಾದ ಜೂಲಿಯಾ ಟಂಕ್ಸ್ (60.67 ಮೀ) ಬೆಳ್ಳಿ ಪದಕ ಪಡೆದರು.

ಇನ್ನು ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಸ್ಪರ್ಧಿಗಳು ಭರ್ಜರಿ ಸಾಧನೆ ಮಾಡಿದ್ದು, ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಲ್ಲಿ ಕಣದಲ್ಲಿದ್ದ ಮೂವರೂ ಭಾರತೀಯರು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. 2018ರ ಕಾಮನ್‌ವೆಲ್ತ್ ಚಾಂಪಿಯನ್, ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ 79.61 ಮೀಟರ್ ದೂರ ಎಸೆದು 5ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರೆ, ರೋಹಿತ್ ಯಾದವ್ (78.37 ಮೀ) ಮತ್ತು ಯಶ್ ವೀರ್ ಸಿಂಗ್ (78.36 ಮೀ) ಕ್ರಮವಾಗಿ 9 ಮತ್ತು 10ನೇ ಸ್ಥಾನದೊಂದಿಗೆ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಅದೇ ರೀತಿ, ಪುರುಷರ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರವೀಣ್ ಚಿತ್ರವೇಲ್ ತಮ್ಮ ಮೊದಲ ಯತ್ನದಲ್ಲೇ 16.41 ಮೀಟರ್ ಜಿಗಿದು 2ನೇ ಸ್ಥಾನ ಹಾಗೂ ಸೆಲ್ವ ಪ್ರಭು ಕೊನೆಯ ಯತ್ನದಲ್ಲಿ 16.26 ಮೀಟರ್ ಜಿಗಿದು 3ನೇ ಸ್ಥಾನ ಪಡೆಯುವ ಮೂಲಕ ಯಶಸ್ವಿಯಾಗಿ ಫೈನಲ್ ತಲುಪಿದ್ದಾರೆ.

Category
ಕರಾವಳಿ ತರಂಗಿಣಿ