ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್ 2026ರ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದ್ದು, ಮಹಿಳೆಯರ 69 ಕೆಜಿ ವಿಭಾಗದಲ್ಲಿ ಭಾರತದ ಹರ್ಜೀಂದರ್ ಕೌರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಸಾಧನೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. 2022ರ ಬರ್ಮಿಂಗ್‌ಹ್ಯಾಮ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, ಈ ಬಾರಿ ತಮ್ಮ ಪದಕದ ಬಣ್ಣವನ್ನು ಬೆಳ್ಳಿಗೆ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹರ್ಜೀಂದರ್ ಸ್ನ್ಯಾಚ್ ವಿಭಾಗದಲ್ಲಿ 101 ಕೆಜಿ ಭಾರವನ್ನು ಎತ್ತುವ ಮೂಲಕ ಆರಂಭದ ಒತ್ತಡವನ್ನು ಕಡಿಮೆಗೊಳಿಸಿಕೊಂಡರು. ನಂತರ ಕ್ಲೀನ್ ಅಂಡ್ ಜರ್ಕ್‌ನಲ್ಲಿ 124 ಕೆಜಿ ತೂಕ ಎತ್ತುವ ಮೂಲಕ ಕ್ರೀಡಾಕೂಟದಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಒಟ್ಟಾರೆಯಾಗಿ 227 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು. ಇದೇ ವಿಭಾಗದಲ್ಲಿ ಕೆನಡಾದ ಚಾರ್ಲೋಟ್ ಸಿಮೋನ್ ಒಟ್ಟು 240 ಕೆಜಿ (108 ಕೆಜಿ ಸ್ನ್ಯಾಚ್ + 132 ಕೆಜಿ ಕ್ಲೀನ್ ಅಂಡ್ ಜರ್ಕ್) ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಆಸ್ಟ್ರೇಲಿಯಾದ ನಿಯಾ ಫೀಬ್ ಹೇಮನ್ ಒಟ್ಟು 218 ಕೆಜಿ (97 ಕೆಜಿ + 121 ಕೆಜಿ) ತೂಕ ಎತ್ತಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.