ಗ್ಲ್ಯಾಸ್ಗೋ : ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 79 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಉದಯೋನ್ಮುಖ ಕ್ರೀಡಾಪಟು, ಆಂಧ್ರಪ್ರದೇಶದ 21 ವರ್ಷದ ವಲ್ಲೂರಿ ಅಜಯ್ ಬಾಬು ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ರಸ್ತುತ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ ಆರನೇ ಪದಕ ಇದಾಗಿದೆ. ರೋಚಕ ಸ್ಪರ್ಧೆಯಲ್ಲಿ ಅಜಯ್ ಅವರು ಸ್ನ್ಯಾಚ್‌ನಲ್ಲಿ 149 ಕೆ.ಜಿ ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ 181 ಕೆ.ಜಿ ಸೇರಿದಂತೆ ಒಟ್ಟು 330 ಕೆ.ಜಿ ಭಾರ ಎತ್ತುವ ಮೂಲಕ ಕೂಟ ದಾಖಲೆಯೊಂದಿಗೆ ಎರಡನೇ ಸ್ಥಾನ ಪಡೆದುಕೊಂಡರು. ಮಲೇಷ್ಯಾದ ಎಂ. ಹಿಡಾಯತ್ ಮುಹಮ್ಮದ್ ಒಟ್ಟು 331 ಕೆಜಿ (147 + 184 ಕೆಜಿ) ತೂಕ ಎತ್ತಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಅಜಯ್ ಅವರಿಗೆ ಕೂದಲೆಳೆಯ ಅಂತರದಲ್ಲಿ ಚಿನ್ನ ಕೈತಪ್ಪಿತು. ಇಂಗ್ಲೆಂಡ್‌ನ ಕ್ರಿಸ್ ಮರ್ಕ್ ಒಟ್ಟು 325 ಕೆಜಿ ಭಾರ ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಆರಂಭಿಕ ಸ್ನ್ಯಾಚ್ ವಿಭಾಗದಲ್ಲಿ ಅಜಯ್ ಅವರು 149 ಕೆಜಿ ಎತ್ತುವ ಹಾದಿಯಲ್ಲಿ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾಗಿದ್ದರೂ, ಅಂತಿಮ ಪ್ರಯತ್ನದಲ್ಲಿ ಲಯ ಕಂಡುಕೊಂಡು ಕೂಟ ದಾಖಲೆಯೊಂದಿಗೆ 149 ಕೆಜಿ ಎತ್ತಿದರು. ಈ ವಿಭಾಗದಲ್ಲಿ ಇಂಗ್ಲೆಂಡ್‌ನ ಕ್ರಿಸ್ 148 ಕೆಜಿ ಹಾಗೂ ಮಲೇಷ್ಯಾದ ಹಿಡಾಯತ್ 147 ಕೆಜಿ ಎತ್ತಿದ್ದರು. ಬಳಿಕ ಕ್ಲೀನ್ ಅಂಡ್ ಜರ್ಕ್‌ನಲ್ಲಿ ಹಿಡಾಯತ್ ಆರಂಭದಲ್ಲಿ 181 ಕೆಜಿ ಎತ್ತಿ ಗೇಮ್ಸ್ ದಾಖಲೆ ಬರೆದಿದ್ದರು. ಅಜಯ್ ತಮ್ಮ ಅಂತಿಮ ಪ್ರಯತ್ನದಲ್ಲಿ 181 ಕೆಜಿ ಎತ್ತುವ ಮೂಲಕ ಈ ದಾಖಲೆಯನ್ನು ಸರಿದೂಗಿಸಿದರು. ಆದರೆ, ಮಲೇಷ್ಯಾದ ಲಿಫ್ಟರ್ ತಮ್ಮ ಕೊನೆಯ ಯತ್ನದಲ್ಲಿ 184 ಕೆಜಿ ಎತ್ತುವ ಮೂಲಕ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದಕ್ಕೂ ಮುನ್ನ ಅಜಯ್ ಅವರು ಅಹಮದಾಬಾದ್‌ನಲ್ಲಿ ನಡೆದ 2025ರ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನ ಪುರುಷರ 79 ಕೆ.ಜಿ ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ 335 ಕೆಜಿ (152 + 183 ಕೆಜಿ) ತೂಕ ಎತ್ತುವ ಮೂಲಕ ಚಾಂಪಿಯನ್‌ಷಿಪ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದರು.