image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಎಸ್‌ಎಸ್‌ಎಫ್‌ ವಿಶ್ವಕಪ್‌ : ಇಶಾ ಸಿಂಗ್‌ಗೆ ಚಿನ್ನ, ಮನು ಭಾಕರ್‌ಗೆ ಕಂಚು

ಐಎಸ್‌ಎಸ್‌ಎಫ್‌ ವಿಶ್ವಕಪ್‌ : ಇಶಾ ಸಿಂಗ್‌ಗೆ ಚಿನ್ನ, ಮನು ಭಾಕರ್‌ಗೆ ಕಂಚು

ಹ್ಯಾಂಗ್‌ಝೌ : ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ (ISSF) ವಿಶ್ವಕಪ್ ಶೂಟಿಂಗ್‌ ಟೂರ್ನಿಯ ಮಹಿಳೆಯರ 25 ಮೀಟರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಇಶಾ ಸಿಂಗ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಮನು ಭಾಕರ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಫೈನಲ್‌ನಲ್ಲಿ ಸ್ಪರ್ಧೆಯುದ್ದಕ್ಕೂ ಅತ್ಯುತ್ತಮ ನಿಯಂತ್ರಣ ಸಾಧಿಸಿದ ಇಶಾ ಸಿಂಗ್, ಒಟ್ಟು 40 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದುಕೊಂಡರು. ಚೀನಾದ ಯುಯುಯು ಜಾಂಗ್‌ (37 ಪಾಯಿಂಟ್‌) ಅವರನ್ನು 3 ಪಾಯಿಂಟ್‌ಗಳ ಅಂತರದಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಟ್ಟರು. ಇನ್ನೊಂದೆಡೆ, ತೀವ್ರ ಪೈಪೋಟಿಯ ಎಲಿಮಿನೇಷನ್ ಸುತ್ತಿನಲ್ಲಿ ಉತ್ತರ ಕೊರಿಯಾದ ಹ್ಯೋನ್ ಗ್ಯೋಂಗ್ ಪಾಕ್ ಅವರನ್ನು ರೋಚಕ ಡಬಲ್ ಶೂಟ್ ಆಫ್‌ನಲ್ಲಿ ಮಣಿಸಿದ ಮನು ಭಾಕರ್ 28 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಈ ಮೂಲಕ ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಭಾರತ ಡಬಲ್ ಪೋಡಿಯಂ ಫಿನಿಶ್ ಮಾಡಿ ಸಟೀಕ್ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೈನ್ಯಮ್ ಬೆಳ್ಳಿ ಪದಕ ಗೆದ್ದಿದ್ದರು. ಪ್ರಸ್ತುತ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆತಿಥೇಯ ಚೀನಾ 6 ಚಿನ್ನ ಸೇರಿದಂತೆ 14 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

Category
ಕರಾವಳಿ ತರಂಗಿಣಿ