image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯನ್ ಹಾಕಿ5ಎಸ್ : ಪಾಕ್ ಮಣಿಸಿ ಚಿನ್ನ ಗೆದ್ದ ಭಾರತ

ಏಷ್ಯನ್ ಹಾಕಿ5ಎಸ್ : ಪಾಕ್ ಮಣಿಸಿ ಚಿನ್ನ ಗೆದ್ದ ಭಾರತ

ಮಸ್ಕತ್ : ಇಲ್ಲಿ ನಡೆದ ಎಫ್‌ಐಹೆಚ್ ಯುವ ಹಾಕಿ5ಎಸ್ ಏಷ್ಯನ್ ಚಾಂಪಿಯನ್‌ಶಿಪ್‌ನ ಸಬ್-ಜೂನಿಯರ್ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಗೋಲುಗಳಿಂದ ಸೋಲಿಸಿ ಚಿನ್ನದ ಪದಕದೊಂದಿಗೆ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಂತಿಮ ಪಂದ್ಯದಲ್ಲಿ ಚುರುಕಾದ ಪಾಸಿಂಗ್ ಹಾಗೂ ಶಿಸ್ತುಬದ್ಧ ಆಟದ ಮೂಲಕ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತಕ್ಕೆ, ಮೊದಲಾರ್ಧದ 5ನೇ ನಿಮಿಷದಲ್ಲಿ ರೋಮಿತ್ ಪಾಲ್ ಪಾಕಿಸ್ತಾನದ ಗೋಲ್‌ಕೀಪರ್‌ರನ್ನು ವಂಚಿಸಿ ಮೊದಲ ಗೋಲು ಬಾರಿಸಿ 1-0 ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದ ಆರಂಭದಲ್ಲೇ 12ನೇ ನಿಮಿಷದಲ್ಲಿ ನಾಯಕ ಕೇತನ್ ಕುಶ್ವಾಹ ಹಾಗೂ 13ನೇ ನಿಮಿಷದಲ್ಲಿ ಶಾರುಖ್ ಅಲಿ ಗೋಲು ಬಾರಿಸುವ ಮೂಲಕ ಭಾರತ 3-0 ಅಂತರದ ಭಾರಿ ಮುನ್ನಡೆ ಸಾಧಿಸಿತು. ಪಾಕಿಸ್ತಾನದ ಮುಹಮ್ಮದ್ ಉಸ್ಮಾನ್ 16ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರ ತಗ್ಗಿಸಿದರಾದರೂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಭಾರತದ ರಕ್ಷಣಾ ಪಡೆ ಬಲವಾಗಿ ನಿಂತು 3-1 ಅಂತರದ ಗೆಲುವು ಹಾಗೂ ಚಾಂಪಿಯನ್ ಟ್ರೋಫಿಯನ್ನು ಖಚಿತಪಡಿಸಿಕೊಂಡಿತು.

ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತೀಯ ಪುರುಷರ ತಂಡವು ಎಲೈಟ್ ಪೂಲ್ ಕೋಷ್ಟಕದಲ್ಲಿ ಅಗ್ರಸ್ಥಾನದಲ್ಲಿದ್ದು, ಅಜೇಯವಾಗಿ ತನ್ನ ಅಭಿಯಾನವನ್ನು ಪೂರ್ಣಗೊಳಿಸಿದೆ. ಫೈನಲ್ ತಲುಪಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಚೊಚ್ಚಲ ಎಫ್‌ಐಹೆಚ್ ಯೂತ್ ಹಾಕಿ5ಎಸ್ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿವೆ. ಮತ್ತೊಂದೆಡೆ, ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸಬ್-ಜೂನಿಯರ್ ತಂಡವು ಚೀನಾ ವಿರುದ್ಧ ದಿಟ್ಟ ಹೋರಾಟ ನೀಡಿತಾದರೂ, ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

Category
ಕರಾವಳಿ ತರಂಗಿಣಿ