image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

15ರ ಹರೆಯದ ವೈಭವ್ ಸೂರ್ಯವಂಶಿ ಸೃಷ್ಟಿಸಿದ ಐತಿಹಾಸಿಕ ವಿಶ್ವ ದಾಖಲೆ!

15ರ ಹರೆಯದ ವೈಭವ್ ಸೂರ್ಯವಂಶಿ ಸೃಷ್ಟಿಸಿದ ಐತಿಹಾಸಿಕ ವಿಶ್ವ ದಾಖಲೆ!

ಹರಾರೆ : ಐಪಿಎಲ್ 2026ರಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿದ್ದ 15 ವರ್ಷದ ಯುವ ಬ್ಯಾಟಿಂಗ್ ಸಂವೇದನೆ ವೈಭವ್ ಸೂರ್ಯವಂಶಿ, ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲೂ ತಮ್ಮ ಧಮಾಕ ಮುಂದುವರಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ಮೂರು ಇನಿಂಗ್ಸ್‌ಗಳಲ್ಲಿ ಸತತ ವಿಫಲತೆ ಎದುರಿಸಿದ್ದರೂ ಧೃತಿಗೆಡದ ಅವರು, ನಂತರದ ಪಂದ್ಯಗಳಲ್ಲಿ ಅದ್ಭುತವಾಗಿ ಚೇತರಿಸಿಕೊಂಡು ತಮ್ಮ ನೈಜ ಕ್ರಿಕೆಟ್ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವೈಭವ್, ಭಾರತದ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಭರ್ಜರಿ ಬೌಂಡರಿ ಬಾರಿಸುವ ಮೂಲಕ ತಂಡದ ಹಾಗೂ ತಮ್ಮ ಖಾತೆ ತೆರೆದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಅವರಿಗೆ ಜಿಂಬಾಬ್ವೆ ಬೌಲರ್‌ಗಳು ಕಟ್ಟುನಿಟ್ಟಿನ ದಾಳಿ ನಡೆಸಿದರೂ ನಿಗ್ರಹಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಹಿರಿಯ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಶೀಘ್ರವಾಗಿ ವಿಕೆಟ್ ಕಳೆದುಕೊಂಡರೂ ವೈಭವ್ ಆತ್ಮವಿಶ್ವಾಸ ಕುಗ್ಗಲಿಲ್ಲ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ವೈಭವ್, ಈ ಪಂದ್ಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿ 31 ಎಸೆತಗಳಲ್ಲಿ ಫಿಫ್ಟಿ ಪೂರೈಸಿದರು.

ಈ ಅರ್ಧಶತಕದೊಂದಿಗೆ ವೈಭವ್ ಸೂರ್ಯವಂಶಿ ಜಾಗತಿಕ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 16 ವರ್ಷ ತುಂಬುವ ಮುನ್ನವೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ನೇಪಾಳದ ಕುಶಾಲ್ ಮಲ್ಲಾ (1 ಅರ್ಧಶತಕ) ಹೆಸರಿನಲ್ಲಿದ್ದ ಜಾಗತಿಕ ದಾಖಲೆಯನ್ನು ವೈಭವ್ ಮುರಿದಿದ್ದಾರೆ.

ಅರ್ಧಶತಕದ ನಂತರವೂ ಧಡಿಪಟಾಲ ದಾಳಿ ಮುಂದುವರಿಸಿದ ವೈಭವ್ ಐತಿಹಾಸಿಕ ಶತಕದತ್ತ ಸಾಗುತ್ತಿದ್ದರು. ಆದರೆ, ವೆಸ್ಲಿ ಮಾಧೇವೆರೆ ಬೌಲಿಂಗ್‌ನಲ್ಲಿ ದೊಡ್ಡ ಸಿಕ್ಸರ್ ಬಾರಿಸಲು ಯತ್ನಿಸಿದಾಗ ಲಾಂಗ್-ಆಫ್‌ನಲ್ಲಿದ್ದ ಬ್ರಾಡ್ ಇವಾನ್ಸ್ ಪಡೆದ ಅದ್ಭುತ ಡೈವಿಂಗ್ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ವೈಭವ್ ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 81 ರನ್ ಬಾರಿಸಿದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಶತಕ ಕೈತಪ್ಪಿದರೂ ವೈಭವ್ ಅವರ ಈ ಸ್ಫೋಟಕ ಆಟ ಭಾರತೀಯ ಕ್ರಿಕೆಟ್‌ನ ಉಜ್ವಲ ಭವಿಷ್ಯದ ಭರವಸೆಯನ್ನು ಎತ್ತಿಹಿಡಿದಿದೆ.

Category
ಕರಾವಳಿ ತರಂಗಿಣಿ